ಭುವನೇಶ್ವರ: ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಭತ್ತದ ಬೆಳೆಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಒಡಿಶಾದ ಅಂಗುಲ್ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡ ಮೋದಿ, ಬಿಜು ಜನತಾ ದಳ (ಬಿಜೆಡಿ) ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೆಲವೇ ಭ್ರಷ್ಟರು ಮುಖ್ಯಮಂತ್ರಿ ಕಚೇರಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಗುಡುಗಿದ್ದಾರೆ.
'ಒಡಿಶಾಕ್ಕಾಗಿ ಬಿಜೆಪಿಗೆ ಮತ ನೀಡಿ. ನಾವು ಈ ರಾಜ್ಯದ ಮಗ ಅಥವಾ ಮಗಳನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. ಜೂನ್ 10ಕ್ಕೆ ಡಬಲ್ ಎಂಜಿನ್ ಸರ್ಕಾರ ರಚನೆಯಾಗಲಿದ್ದು, ಪ್ರಮಾಣವಚನ ಸಮಾರಂಭಕ್ಕೆ ನಿಮ್ಮನ್ನೆಲ್ಲ ಆಹ್ವಾನಿಸಲು ಇಲ್ಲಿಗೆ ಬಂದಿದ್ದೇನೆ' ಎಂದು ಹೇಳಿದ್ದಾರೆ.
ಮುಂದುವರಿದು, 'ಛತ್ತೀಸಗಢದಂತೆ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ, ಭತ್ತದ ಬೆಳೆಗೆ ನೀಡುವ ಎಂಎಸ್‌ಪಿ ಅನ್ನು ₹ 2,200ರಿಂದ ₹ 3,100ಕ್ಕೆ ಹೆಚ್ಚಿಸಲಾಗುವುದು. ಇದು ಮೋದಿಯ ಗ್ಯಾರಂಟಿ. ಭತ್ತದ ಬೆಳೆಯ ಹಣ ಕೇವಲ ಎರಡೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ' ಎಂದು ಭರವಸೆ ನೀಡಿದ್ದಾರೆ.
ಏಕಕಾಲದಲ್ಲಿ ಚುನಾವಣೆ
ಒಡಿಶಾದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿವೆ. ತಲಾ 4 ಹಂತಗಳಲ್ಲಿ ಮತದಾನ ನಿಗದಿಯಾಗಿದೆ.
ಲೋಕಸಭೆಯ 21 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಮೇ 13ರಂದು ಮತದಾನ ಮುಗಿದಿದೆ. ಇಂದು (ಮೇ 20) 5 ಕ್ಷೇತ್ರಗಳಿಗೆ ಮತ ಚಲಾವಣೆಯಾಗುತ್ತಿದೆ. ಇನ್ನುಳಿದ ಕ್ಷೇತ್ರಗಳಿಗೆ ಮೇ 25 ಹಾಗೂ ಜೂನ್ 1ರಂದು ಮತದಾನ ನಡೆಯಲಿದೆ.
ವಿಧಾನಸಭೆಯ 147 ಕ್ಷೇತ್ರಗಳ ಪೈಕಿ, 28ಕ್ಕೆ ಮೇ 13ರಂದು ಮತದಾನವಾಗಿದೆ. ಇಂದು 35 ಸ್ಥಾನಗಳಿಗೆ ಮತ ಚಲಾವಣೆಯಾಗುತ್ತಿದೆ. ತಲಾ 42 ಕ್ಷೇತ್ರಗಳಲ್ಲಿ ಮೇ 25ರಂದು ಹಾಗೂ ಜೂನ್ 1ರಂದು ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಎರಡೂ ಚುನಾವಣೆಗಳ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.