ನವದೆಹಲಿ: ಚುನಾವಣೆ ಗೆದ್ದ ನಂತರ ‘ಇಂಡಿಯಾ’ ಮೈತ್ರಿಕೂಟದ ಮಿತ್ರಪಕ್ಷಗಳೆಲ್ಲ ಸೇರಿ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಿಳಿಸಿದರು.
2004ರಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆಗೆ ಒದಗಿದ ಗತಿಯೇ, ಎನ್‌ಡಿಎ ಮೈತ್ರಿಕೂಟಕ್ಕೆ 2024ರ ಚುನಾವಣೆಯಲ್ಲಿ ಒದಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ‘ಭಾರತವು ಎರಡು ಮೂರು ಸಂಘಟಿತ ವ್ಯಾಪಾರ ಕೂಟಗಳಿಗಾಗಿ ಇರುವಂತಹದ್ದಲ್ಲ, ದೇಶದ ಬೃಹತ್ ಜನಸಮೂಹಕ್ಕಾಗಿ ಇರುವಂತಹದ್ದು. ನಮ್ಮದು ಏಕಸ್ವಾಮ್ಯದ ದೇಶವಲ್ಲ, ಉದ್ದಿಮೆಗಳ ನಡುವೆ ಸಮಾನ ಸ್ಪರ್ಧೆಯ ಅವಕಾಶ ಇರುವ ದೇಶ’ ಎಂದು ಹೇಳಿದರು.
‘2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯಡಿ ಚುನಾವಣೆ ಎದುರಿಸಿದ್ದ ಎನ್‌ಡಿಎ, ಯುಪಿಎ ಎದುರು ಸೋಲು ಅನುಭವಿಸಿತ್ತು. ಆದರೆ, ಇದು ಮೂಲಭೂತವಾಗಿ ಭಿನ್ನವಾದ ಚುನಾವಣೆ. ಏಕೆಂದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಇಂದು ಅಪಾಯದಲ್ಲಿವೆ’ ಎಂದು ಅಭಿಪ್ರಾಯಪಟ್ಟರು.
‘ಆರ್‌ಎಸ್‌ಎಸ್, ಬಿಜೆಪಿ ಮತ್ತು ಮುಖ್ಯವಾಗಿ ನರೇಂದ್ರ ಮೋದಿ ರೂಪಿಸಿರುವ ತಂತ್ರಗಾರಿಕೆಯ ಮೂಲ ಏನು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕೋಟ್ಯಧಿಪತಿ ಗೌತಮ್ ಅದಾನಿಗೆ ಬಂದರು, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಏಕಸ್ವಾಮ್ಯ ನೀಡಿದಂತೆ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳ ಮೂಲಕ ಪ್ರಧಾನಿ ಅವರು ರಾಜಕೀಯ ದೇಣಿಗೆ ಪಡೆಯುವಲ್ಲಿಯೂ ಏಕಸ್ವಾಮ್ಯತೆಯನ್ನು ಸಾಧಿಸಿದ್ದಾರೆ’ ಎಂದು ಹೇಳಿದರು.
ರಾಹುಲ್ ಹೇಳಿದ್ದು...
* ಇದೊಂದು ಜಿದ್ದಾಜಿದ್ದಿಯ ಚುನಾವಣೆ. ನಾವು ಅದ್ಭುತ ಹೋರಾಟ ಮಾಡಲಿದ್ದು, ಚುನಾವಣೆ ಗೆಲ್ಲಲಿದ್ದೇವೆ
* ಚುನಾವಣಾ ಬಾಂಡ್ ಯೋಜನೆಯ ಮೂಲಕ ಮೋದಿ ಅವರು ಬೆದರಿಕೆ, ಸುಲಿಗೆ, ಒತ್ತಡಗಳನ್ನು ಬಳಸಿ ರಾಜಕೀಯ ದೇಣಿಗೆ ಸಂಗ್ರಹಿಸಿದರು
* ನರೇಂದ್ರ ಮೋದಿ ಭಯಗೊಂಡಿದ್ದಾರೆ. ಅದರ ಫಲವೇ ಅವರು 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು
* 2019ರಲ್ಲಿ ಆರಂಭವಾದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯು ಇಂದು ಪರಾಕಾಷ್ಠೆ ಮುಟ್ಟಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.