ADVERTISEMENT

ಬುಲ್ಡೋಜರ್ ನಮ್ಮದಲ್ಲ, ಬಿಜೆಪಿ ಸರ್ಕಾರದ್ದು: ಮೋದಿ ಹೇಳಿಕೆಗೆ ವಿಪಕ್ಷಗಳ ಖಂಡನೆ

ಕ್ರಮ ಜರುಗಿಸಲು ಆಯೋಗಕ್ಕೆ ಆಗ್ರಹ

ಪಿಟಿಐ
Published 18 ಮೇ 2024, 14:05 IST
Last Updated 18 ಮೇ 2024, 14:05 IST
<div class="paragraphs"><p>‘ಇಂಡಿಯಾ’ ಕೂಟದ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂಬೈನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು</p></div>

‘ಇಂಡಿಯಾ’ ಕೂಟದ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂಬೈನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು

   

–ಪಿಟಿಐ ಚಿತ್ರ

ಮುಂಬೈ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು ಬುಲ್ಡೋಜರ್ ಮಾಡಲಾಗುತ್ತದೆ ಎನ್ನುವ ‍ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ‘ಇಂಡಿಯಾ’ ಕೂಟದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ADVERTISEMENT

ಎಲ್ಲ ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ತಾವು ಬದ್ಧವಾಗಿದ್ದು, ದೇಶವು ಸಂವಿಧಾನದ ಪ್ರಕಾರ ನಡೆಯುವ ಬಗ್ಗೆ ಖಾತರಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು ಮುಂಬೈನಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

‘ನಾವು ಎಂದೂ ಯಾರ ಮೇಲೆಯೂ ಬುಲ್ಡೋಜರ್ ಬಳಸಿಲ್ಲ. ಬುಲ್ಡೋಜರ್ ಅವರ ಸರ್ಕಾರದ್ದು. ಮೋದಿ ಅವರಿಗೆ ಸುಳ್ಳು ಹೇಳುವ ಚಾಳಿ ಇದೆ ಮತ್ತು ಅವರು ಕಾಂಗ್ರೆಸ್ ಎಂದೂ ಮಾಡದೇ ಇರುವಂತಹ, ಮಾಡಲಾಗದ ಕೆಲಸಗಳ ಬಗ್ಗೆ ಮಾತನಾಡುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

‘ಪ್ರಧಾನಿ ಜನರನ್ನು ಪ್ರಚೋದಿಸಲು ಹಾಗೆ ಹೇಳಿದ್ದು, ಅದರ ವಿರುದ್ಧ ಚುನಾವಣಾ ಆಯೋಗವು ಕ್ರಮ ಜರುಗಿಸಬೇಕು. ನಮ್ಮ ಸರ್ಕಾರ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತದೆ. ನಾವು ಎಲ್ಲವನ್ನೂ ರಕ್ಷಿಸುತ್ತೇವೆ’ ಎಂದು ಹೇಳಿದರು.

‘ಅವರು ಎಲ್ಲಿ ಹೋದರೂ ವಿಭಜನೆ ಮಾಡಲು ಪ್ರಯತ್ನಿಸುತ್ತಾರೆ, ಸಮಾಜವನ್ನು ವಿಭಜಿಸುವ ಮಾತು ಆಡುತ್ತಾರೆ’ ಎಂದು ಆರೋಪಿಸಿದರು.

‘ಇಂಡಿಯಾ ಕೂಟದ ಸರ್ಕಾರವು ಅಯೋಧ್ಯೆ ರಾಮಮಂದಿರದ ನಿರ್ಮಾಣವನ್ನು ಪೂರ್ಣಗೊಳಿಸುತ್ತದೆ’ ಎಂದು ಉದ್ಧವ್ ಠಾಕ್ರೆ ಹೇಳಿದರೆ, ದೇವಸ್ಥಾನಗಳನ್ನಷ್ಟೇ ಅಲ್ಲ, ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರಗಳನ್ನೂ ರಕ್ಷಿಸುವುದು ಸರ್ಕಾರದ ಜವಾಬ್ದಾರಿ’ ಎಂದು ಶರದ್ ಪವಾರ್ ಹೇಳಿದರು.

ತಾವು ಹಿಂದೂ ಎನ್ನುವ ಪದದ ಬದಲಿಗೆ ದೇಶಭಕ್ತ ಎನ್ನುವ ಪದ ಬಳಸುವುದಕ್ಕೆ ಬಿಜೆಪಿ ಲೇವಡಿ ಮಾಡುವ ಬಗ್ಗೆ ಮಾತನಾಡಿದ ಉದ್ಧವ್, ‘ಹಿಂದೂಗಳು ದೇಶಭಕ್ತರಲ್ಲವೇ? ದೇಶಭಕ್ತರನ್ನು ವಿರೋಧಿಸುವವರು ರಾಷ್ಟ್ರವಿರೋಧಿಗಳು’ ಎಂದರು.

‘ಪಾಕಿಸ್ತಾನ ಇರುವುದು ಬಿಜೆಪಿಯ ತಲೆಯಲ್ಲಿ. ಬಹುಶಃ ಮೋದಿ ಅವರು ನವಾಜ್ ಷರೀಫ್ ಅವರ ಹುಟ್ಟುಹಬ್ಬದ ಕೇಕ್ಅನ್ನು ಈಗಲೂ ಇಷ್ಟಪಡುತ್ತಾರೆ. ಅವರು ಸದಾ ಕಾಲ ಪಾಕಿಸ್ತಾನವನ್ನು ಸ್ಮರಿಸುತ್ತಿರುತ್ತಾರೆ. ನನ್ನ ರ್‍ಯಾಲಿಗಳಲ್ಲಿ ನಾನು ಎಂದೂ ಪಾಕಿಸ್ತಾನದ ಬಾವುಟ ಕಂಡಿಲ್ಲ. ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹುಸಿ ನಿರೂಪಣೆಗಳನ್ನು ಕಟ್ಟಲಾಗುತ್ತಿದೆ’ ಎಂದು ತಿಳಿಸಿದರು.

ಜನರನ್ನು ಪ್ರಚೋದಿಸುವ ಸಮಾಜವನ್ನು ವಿಭಜಿಸುವ ಪ್ರಧಾನಿಯನ್ನು ನನ್ನ 53 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಕಂಡಿಲ್ಲ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಕಾಂಗ್ರೆಸ್ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸುತ್ತದೆ ಎಂದು ಬಿಜೆಪಿ ಹೇಳಿದರೆ ಆ ಪಕ್ಷವು ಆರ್‌ಎಸ್‌ಎಸ್ ಅನ್ನೂ ನಿಷೇಧಿಸುತ್ತದೆ. 
-ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.