ADVERTISEMENT

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

ಪಿಟಿಐ
Published 27 ಏಪ್ರಿಲ್ 2024, 14:14 IST
Last Updated 27 ಏಪ್ರಿಲ್ 2024, 14:14 IST
<div class="paragraphs"><p>ಪ್ರಿಯಾಂಕಾ ಗಾಂಧಿ</p></div>

ಪ್ರಿಯಾಂಕಾ ಗಾಂಧಿ

   

ವಲ್ಸಾದ್: ‘ಛಿದ್ರಗೊಂಡ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತಂದಿದ್ದ ನನ್ನ ತಂದೆಯನ್ನೂ ಒಳಗೊಂಡಂತೆ ಹಲವು ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಆದರೆ ಇಂಥ ಸುಳ್ಳು ಹೇಳುವವರನ್ನು ಎಂದೂ ಕಂಡಿರಲಿಲ್ಲ’ ಎಂದು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯದಲ್ಲಿ ಕಾಂಗ್ರೆಸ್‌ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.

ಗುಜರಾತ್‌ನ ವಲ್ಸಾದ್‌ನ ಧರ್ಮಪುರ ಗ್ರಾಮದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ‘ಈ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. 1991ರಲ್ಲಿ ತಮಿಳುನಾಡಿನ ಪೆರಂಬದೂರಿನಲ್ಲಿ ಸಂಭವಿಸಿದ ಮಾನವಬಾಂಬ್ ಸ್ಫೋಟದಲ್ಲಿ ಛಿದ್ರಗೊಂಡ ರಾಜೀವ್ ಅವರ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತರಲಾಗಿತ್ತು. ಮನಮೋಹನ ಸಿಂಗ್ ಅವರು ಈ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನೇ ತಂದಿದ್ದಾರೆ. ಕಾಂಗ್ರೆಸ್‌ ಪಕ್ಷ ಹೊರತಾಗಿಯೂ, ಅಟಲ್ ಬಿಹಾರ ವಾಜಪೇಯಿ ಅವರು ಒಬ್ಬ ಸುಸಂಸ್ಕೃತ ವ್ಯಕ್ತಿಯಾಗಿದ್ದವರು. ಆದರೆ ಈ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನರಿಗೆ ಸುಳ್ಳು ಹೇಳುವ ಪ್ರಧಾನಿ ಸಿಕ್ಕಿದ್ದಾರೆ. ಜನರ ಮುಂದೆಯಾದರೂ ಸತ್ಯ ಹೇಳಬೇಕು ಎಂದು ಎಂದಿಗೂ ಇವರಿಗೆ ಅನಿಸುತ್ತಲೇ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷ–ಕಿರಣ ಯಂತ್ರ ತರುತ್ತಾರೆ. ಮಹಿಳೆಯರ ಮಂಗಳಸೂತ್ರವನ್ನೂ ಬಿಡದೆ ಕಸಿಯುತ್ತಾರೆ. ಅದನ್ನು ಬೇರೊಬ್ಬರಿಗೆ ನೀಡುತ್ತಾರೆ ಎಂದು ಜನರಿಗೆ ಮೋದಿ ಎಚ್ಚರಿಕೆ ನೀಡುತ್ತಿದ್ದಾರೆ. ಇದು ನಿಜ ಎಂದು ಭಾವಿಸಲು ಸಾಧ್ಯವೇ? ಕಾಂಗ್ರೆಸ್‌ನ ನ್ಯಾಯ ಪತ್ರ ಪ್ರಣಾಳಿಕೆಯು ಮೋದಿ ಅವರ ಆತ್ಮವಿಶ್ವಾಸವನ್ನೇ ಅಲುಗಾಡಿಸಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ಆಸ್ತಿ ಮರು ಹಂಚಿಕೆಯ ಭರವಸೆ ನೀಡಿದೆ ಎಂದು ಪ್ರಧಾನಿ ಮೋದಿ ಅವರು ಹಲವು ರ‍್ಯಾಲಿಗಳಲ್ಲಿ ಆರೋಪಿಸಿ, ವಾಗ್ದಾಳಿ ನಡೆಸಿದ್ದಾರೆ. ಜತೆಗೆ ಮಹಿಳೆಯರ ಮಂಗಳಸೂತ್ರವನ್ನೂ ಇವರು ಬಿಡರು ಎಂದಿದ್ದರು. ಪ್ರಧಾನಿ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಸುಳ್ಳು ಆರೋಪ ಎಂದಿದ್ದಾರೆ.

ಮೋದಿ ಅವರು ಎಂದಿಗೂ ಶಿಕ್ಷಣ, ಉದ್ಯೋಗ, ನೀರು, ಆರೋಗ್ಯ ಮತ್ತು ಹಣ ದುಬ್ಬರ ಕುರಿತು ಮಾತನಾಡುವುದೇ ಇಲ್ಲ. ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದು, ದೇಶಗಳನ್ನು ಸುತ್ತುವುದು ಇವರ ಖಯಾಲಿ. ಆದರೆ ಜನರು ಈಗ ಕಳದ ಐದು ವರ್ಷಗಳ ಅಂಕಪಟ್ಟಿ ಹಿಡಿದು ಕೇಳುತ್ತಿದ್ದಾರೆ. ಇದು ಮೋದಿ ಅವರ ತಲೆಬಿಸಿಗೆ ಕಾರಣವಾಗಿದೆ. ಹೀಗಾಗಿ ಈ ವಿಶ್ವಗುರು ಹಿಂದೂ–ಮುಸ್ಲಿಂ ವಿಷಯವನ್ನು ಮುಂದಕ್ಕೆ ತರುತ್ತಿದ್ದಾರೆ.
– ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ

ಸಂವಿಧಾನ ಬದಲಾವಣೆ ಮಾಡುತ್ತಾರೆ ಎಚ್ಚರ!

‘ಬಿಜೆಪಿ ನೇತೃತ್ವದ ಎನ್‌ಡಿಎ 400 ಸೀಟುಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಏಕೆಂದರೆ ಸಂವಿಧಾನವನ್ನು ಬದಲಿಸುವುದು ಅದರ ಉದ್ದೇಶ. ಏಕೆಂದರೆ ಆಡಳಿತಾರೂಢ ಪಕ್ಷವು ಮೊದಲು ಇದನ್ನು ನಿರಾಕರಿಸಿ, ನಂತರ ತಮ್ಮ ಗುಪ್ತ ಅಜೆಂಡಾವನ್ನು ಜಾರಿಗೊಳಿಸುವುದು ಅವರ ಇರಾದೆ. ಅವರ ಪಕ್ಷದ ಬಹಳಷ್ಟು ಮುಖಂಡರು ಹಲವು ವೇದಿಕೆಗಳಲ್ಲಿ ಸಂವಿಧಾನ ಬದಲಾವಣೆಯ ವಿಷಯಗಳನ್ನು ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ರಧಾನಿ ಮೋದಿ ಮಾತ್ರ ಅಂಥ ಉದ್ದೇಶ ಇಲ್ಲ ಎನ್ನುತ್ತಿದ್ದಾರೆ. ಆದರೆ ಸಂವಿಧಾನ ಬದಲಿಸುವ ಅವರ ಉದ್ದೇಶ ನಿಜ’ ಎಂದು ಪ್ರಿಯಾಂಕಾ ಎಚ್ಚರಿಸಿದ್ದಾರೆ.

‘ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಂವಿಧಾನ ಬದಲಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಆ ಮೂಲಕ ಜನರ ಹಕ್ಕುಗಳನ್ನು ಕಸಿಯುವ ಹುನ್ನಾರ ಅಡಗಿದೆ’ ಎಂದು ಎಚ್ಚರಿಸಿದರು.

ಗುಜರಾತ್‌ನ 26 ಕ್ಷೇತ್ರಗಳಿಗೆ 3ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.