ADVERTISEMENT

ಮತದಾರರನ್ನು ಕಾಡುತ್ತಿರುವ ಹಣದುಬ್ಬರ, ನಿರುದ್ಯೋಗ: ಲೋಕನೀತಿ–CSDS ಸಮೀಕ್ಷೆ ವರದಿ

ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 13:37 IST
Last Updated 12 ಏಪ್ರಿಲ್ 2024, 13:37 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ನಿರುದ್ಯೋಗ ಮತ್ತು ಬೆಲೆ ಏರಿಕೆಯು ಭಾರತದ ಮತದಾರರ ಪಾಲಿಗೆ ಪ್ರಮುಖ ಸಮಸ್ಯೆಗಳು ಎಂದು ಲೋಕನೀತಿ–ಸಿಎಸ್‌ಡಿಎಸ್ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯು ಕಂಡುಕೊಂಡಿದೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವ, ಬಿಜೆಪಿ ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯವಾದದ ಕಾರ್ಯಸೂಚಿ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನೆರವಿಗೆ ಬರಲಿವೆ ಎಂದು ಸಮೀಕ್ಷೆಯು ಹೇಳಿದೆ.

ADVERTISEMENT

ಜಗತ್ತಿನ ಬೇರೆ ದೇಶಗಳ ಬೆಳವಣಿಗೆ ಪ್ರಮಾಣಕ್ಕಿಂತ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವು ಹೆಚ್ಚಾಗಿದ್ದರೂ, ತಯಾರಿಕಾ ವಲಯಕ್ಕೆ ಮೋದಿ ಅವರು 10 ವರ್ಷಗಳಿಂದ ಆದ್ಯತೆ ನೀಡಿದ್ದರೂ, ಉದ್ಯೋಗಸೃಷ್ಟಿಯು ಇಂದಿಗೂ ಸವಾಲಾಗಿಯೇ ಉಳಿದಿರುವುದು ಬೆಳವಣಿಗೆಯ ಪ್ರಯೋಜನವು ಎಲ್ಲರಿಗೂ ಸಮಾನವಾಗಿ ದೊರಕಿಲ್ಲ ಎಂಬ ಸಂಗತಿಯನ್ನು ಹೇಳುತ್ತಿದೆ ಎಂದು ವರದಿಯು ಉಲ್ಲೇಖಿಸಿದೆ.

ದೇಶದ 19 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 10 ಸಾವಿರ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇಕಡ 27ರಷ್ಟು ಮಂದಿ ನಿರುದ್ಯೋಗವು ಪ್ರಮುಖ ಸಮಸ್ಯೆ ಎಂದು ಹೇಳಿದ್ದಾರೆ. ಬೆಲೆ ಏರಿಕೆಯು ಪ್ರಮುಖ ಸಮಸ್ಯೆ ಎಂದು ಹೇಳಿದವರ ಪ್ರಮಾಣವು ಶೇ 23ರಷ್ಟಿದೆ ಎಂದು ಸಮೀಕ್ಷೆಯನ್ನು ಉಲ್ಲೇಖಿಸಿ ‘ದ ಹಿಂದೂ’ ಪತ್ರಿಕೆಯು ವರದಿ ಮಾಡಿದೆ.

ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಆಗುತ್ತಿರುವುದು ಭಾರತದಲ್ಲಿ. ಭಾರತದ ಅರ್ಥ ವ್ಯವಸ್ಥೆಯು ವಿಶ್ವದ ಐದನೆಯ ಅತಿದೊಡ್ಡ ಅರ್ಥವ್ಯವಸ್ಥೆ ಕೂಡ ಹೌದು. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಉದ್ಯೋಗ ಹುಡುಕಿಕೊಳ್ಳುವುದು ಬಹಳ ಕಷ್ಟವಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇ 62ರಷ್ಟು ಮಂದಿ ಹೇಳಿದ್ದಾರೆ.

ಮೋದಿ ಅವರು ಮೊದಲು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇ 4.9ರಷ್ಟು ಇತ್ತು. ಇದು 2022–23ರಲ್ಲಿ ಶೇ 5.4ಕ್ಕೆ ಏರಿಕೆ ಆಗಿದೆ. 2022–23ರಲ್ಲಿ 15ರಿಂದ 29 ವರ್ಷದ ನಡುವಿನ ವಯಸ್ಸಿನ ನಗರವಾಸಿ ಯುವಕರ ಪೈಕಿ ಶೇಕಡ 16ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದರು. ಇದಕ್ಕೆ ಕಾರಣ ಅಗತ್ಯ ಕೌಶಲಗಳು ಇಲ್ಲದಿರುವುದು ಹಾಗೂ ಗುಣಮಟ್ಟದ ಉದ್ಯೋಗಗಳ ಕೊರತೆ ಎಂಬುದನ್ನು ಸರ್ಕಾರಿ ಅಂಕಿ–ಅಂಶಗಳು ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.