ಇಂದೋರ್: ಗುಜರಾತ್‌ನ ಸೂರತ್ ನಂತರ ಕಾಂಗ್ರೆಸ್ ಪಕ್ಷಕ್ಕೆ ಮಧ್ಯಪ್ರದೇಶದಲ್ಲಿಯೂ ಮುಖಭಂಗ ಉಂಟಾಗಿದೆ. ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್, ಮತದಾನಕ್ಕೆ ಇನ್ನು ಎರಡು ವಾರ ಇರುವಾಗ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದ ಬಳಿಕ ಅವರು ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಜೆಪಿ ಫೋಟೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಧ್ಯಪ್ರದೇಶದ ಜಗದೀಶ್ ದೇವ್ಡಾ, ರಾಜ್ಯ ಸಚಿವ ಕೈಲಾಶ್ ವಿಜಯವರ್ಗೀಯ ಮತ್ತು ಇತರ ಮುಖಂಡರೊಂದಿಗೆ ಬಮ್ ಕಾಣಿಸಿಕೊಂಡಿದ್ದಾರೆ.
ಇಂದೋರ್ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಬಮ್ ನಾಮಪತ್ರ ವಾಪಸ್ ಪಡೆದಿರುವುದನ್ನು ಚುನಾವಣಾಧಿಕಾರಿಯೂ ಆದ ಇಂದೋರ್ ಜಿಲ್ಲಾಧಿಕಾರಿ ಅಶೀಶ್ ಸಿಂಗ್ ಖಚಿತಪಡಿಸಿದ್ದಾರೆ.
‘ಕಾಂಗ್ರೆಸ್ ಅಭ್ಯರ್ಥಿ ಬಮ್ ಸೇರಿದಂತೆ ಮೂವರು ಸೋಮವಾರ ನಾಮಪತ್ರ ವಾಪಸ್ ಪಡೆದರು. ಆ ಪ್ರಕ್ರಿಯೆಯನ್ನು ವಿಡಿಯೊದಲ್ಲಿ ದಾಖಲಿಸಲಾಗಿದೆ. ಒಟ್ಟಾರೆ, ಕ್ಷೇತ್ರದಲ್ಲಿ ಒಂಬತ್ತು ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 14 ಮಂದಿ ಕಣದಲ್ಲಿ ಉಳಿದಿದ್ದಾರೆ’ ಎಂದು ಸಿಂಗ್ ತಿಳಿಸಿದ್ದಾರೆ.
ಬಮ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ವಾಪಸ್ ಪಡೆಯಲು ಹೋದಾಗ ಅವರೊಂದಿಗೆ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರೂ ಇದ್ದರು. ಮೆಂಡೋಲಾ ಅವರು ವಿಜಯವರ್ಗೀಯ ಅವರ ಆಪ್ತರಾಗಿದ್ದಾರೆ. ತಂತ್ರಗಾರಿಕೆ ರೂಪಿಸಿ, ಅದರಂತೆ ಕೊನೆಯ ದಿನದಂದೇ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ವಿಜಯವರ್ಗೀಯ ‘ಎಕ್ಸ್’ ನಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರೊಂದಿಗೆ ಮೆಂಡೋಲಾ ಹಾಗೂ ಅಕ್ಷಯ್ ಅವರಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಅವರ ನಾಯಕತ್ವದಲ್ಲಿ ಇಂದೋರ್‌ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರಿಗೆ ಬಿಜೆಪಿಗೆ ಸ್ವಾಗತ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಬಮ್ ಅವರ ಮನೆಯ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸುತ್ತಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಇಂದೋರ್‌ನ ನ್ಯಾಯಾಲಯವೊಂದರಲ್ಲಿ ಅಕ್ಷಯ್, ಅವರ ತಂದೆ ಮತ್ತಿತರರ ವಿರುದ್ಧ 2007ರಲ್ಲಿ ದಾಖಲಾಗಿದ್ದ ಭೂವಿವಾದವೊಂದರ ವಿಚಾರಣೆ ನಡೆಯುತ್ತಿತ್ತು. ಐದು ದಿನಗಳ ಹಿಂದೆ ಪ್ರಕರಣಕ್ಕೆ ತಿರುವು ಸಿಕ್ಕಿತ್ತು. 17 ವರ್ಷಗಳ ನಂತರ, ಏಪ್ರಿಲ್ ಐದರಂದು ದೂರುದಾರರಾದ ಯೂನಿಸ್ ಪಟೇಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ 307 (ಕೊಲೆ ಯತ್ನ) ಆರೋಪವನ್ನೂ ಸೇರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯವು ಏಪ್ರಿಲ್ 24ರಂದು ಸಮ್ಮತಿ ಸೂಚಿಸಿತ್ತು.
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅಕ್ಷಯ್, ಇಂದೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಕಣಕ್ಕಿಳಿದಿದ್ದರು.
ಇತ್ತೀಚೆಗೆ ಕಾಂಗ್ರೆಸ್‌ನ ಮೂವರು ಮಾಜಿ ಶಾಸಕರು ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾಗಿದ್ದರು. ಹಾಗಾಗಿ ಹೊಸಬರಾದ ಅಕ್ಷಯ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಇಂದೋರ್ ಬಿಜೆಪಿ ಭದ್ರಕೋಟೆಯಾಗಿದ್ದು, ರಾಜ್ಯದ ಅತಿ ಹೆಚ್ಚು ಮತದಾರರುಳ್ಳ (25.13 ಕೋಟಿ) ಕ್ಷೇತ್ರವೂ ಆಗಿದೆ. ಕ್ಷೇತ್ರವನ್ನು ಎಂಟು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿತ್ತು.
‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’
ನವದೆಹಲಿ (ಪಿಟಿಐ): ಅಕ್ಷಯ್ ನಾಮಪತ್ರ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದೆ. ಒಬ್ಬರ ನಂತರ ಒಬ್ಬರಂತೆ ಅಭ್ಯರ್ಥಿಗಳನ್ನು ಬೆದರಿಸಲಾಗುತ್ತಿದ್ದು ಚುನಾವಣಾ ಆಯೋಗವು ಇದೆಲ್ಲದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇಂಥ ಪರಿಸ್ಥಿತಿಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದು ಸಾಧ್ಯವೇ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೇತ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಭಾರತದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ನಾವು ಹೇಳಿದ್ದು ಇದನ್ನೇ. ಅಭ್ಯರ್ಥಿಗಳನ್ನು ಪುಸಲಾಯಿಸುವುದು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರುವುದು ಅವರನ್ನು ಹಾಗೂ ಸೂಚಕರನ್ನು ಬೆದರಿಸುವುದು ನಡೆಯುತ್ತಿದೆ’ ಎಂದು ಹೇಳಿದ್ದಾರೆ.
‘ಪ್ರಧಾನಿ ದ್ವೇಷ ಭಾಷಣ ಮಾಡಿದರೆ ಅವರನ್ನು ಜವಾಬ್ದಾರರನ್ನಾಗಿಸದೇ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ನೀಡಿದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.