ADVERTISEMENT

LS Polls: ಮತದಾನ ದಿನ vs ಅಂತಿಮ ವರದಿ: 1.07 ಕೋಟಿ ಮತಗಳ ವ್ಯತ್ಯಾಸ ಎಂದ ಕಮಲನಾಥ್

ಪಿಟಿಐ
Published 22 ಮೇ 2024, 16:01 IST
Last Updated 22 ಮೇ 2024, 16:01 IST
ಕಮಲನಾಥ್
ಕಮಲನಾಥ್   

ಭೋಪಾಲ್: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ದಿನದ ಮತದಾನ ಪ್ರಮಾಣದ ವಿವರಕ್ಕೂ ನಂತರ ಆಯೋಗ ನೀಡುವ ಅಂತಿಮ ಅಂಕಿಅಂಶಕ್ಕೂ 1.07 ಕೋಟಿ ಮತಗಳ ವ್ಯತ್ಯಾಸವಿದೆ’ ಎಂದು ಕಾಂಗ್ರೆಸ್ ನಾಯಕ ಕಮಲನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಮೈಕ್ರೊ ಬ್ಲಾಗಿಂಗ್ ತಾಣದಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, 'ಮತದ ಪ್ರಮಾಣದಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸ ಕಂಡುಬಂದಿರುವುದು ಅಚ್ಚರಿ ಮೂಡಿಸುವಂತದ್ದು. ಈ ಕುರಿತು ಚುನಾವಣಾ ಆಯೋಗವು ಅತ್ಯಂತ ಶೀಘ್ರದಲ್ಲಿ ಗೊಂದಲ ನಿವಾರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಚುನಾವಣಾ ಪ್ರಕ್ರಿಯೆಯು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು. ಆದರೆ ಪಾರದರ್ಶಕತೆಯ ಕೊರತೆ ಇದ್ದಲ್ಲಿ, ಕೆಲವೊಮ್ಮೆ ಸರಿಯಾದ ಕ್ರಮವೂ ತಪ್ಪಾಗಿ ಕಾಣಿಸುತ್ತದೆ. ಹೀಗಾಗಿ ಚುನಾವಣಾ ಆಯೋಗವು ಮುಂದೆ ಬಂದು, ಎಲ್ಲಾ ರೀತಿಯ ಗೊಂದಲಗಳಿಗೆ ತೆರೆ ಎಳೆಯಬೇಕು. ಮತದಾನ ಪ್ರಮಾಣದಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸ ಹೇಗಾಯಿತು ಎಂಬುದನ್ನು ವಿವರಿಸಬೇಕು’ ಎಂದಿದ್ದಾರೆ.

ADVERTISEMENT

ಮಧ್ಯಪ್ರದೇಶದ ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ಕಮಲನಾಥ್ ಅವರ ಪುತ್ರ ನಕುಲ್ ಅವರು ಸ್ಪರ್ಧಿಸಿದ್ದಾರೆ. 2019ರಲ್ಲಿ ಇದೇ ಕ್ಷೇತ್ರದಿಂದ ನಕುಲ್ ಸ್ಪರ್ಧಿಸಿ ಗೆದ್ದಿದ್ದ ಕಾಂಗ್ರೆಸ್‌ನ ಏಕೈಕ ಸಂಸದರಾಗಿದ್ದರು. 

ಗೆಲುವು ನಿರ್ಧರಿಸುವ ಹೆಚ್ಚಿನ ಮತಗಳು

4ನೇ ಹಂತ ಕೊನೆಗೊಂಡಾಗ 1.07 ಕೋಟಿ ಮತಗಳ ವ್ಯತ್ಯಾಸ ಕಂಡುಬಂದಿರುವುದು ಆತಂಕಕಾರಿ ಎಂದು ಕಾಂಗ್ರೆಸ್‌ನ ಕೇರಳ ಘಟಕದ ಮುಖಂಡ ವಿಜಯ್ ತೊಟ್ಟತ್ತಿಲ್‌ ಅವರು ಹೇಳಿದ್ದಾರೆ.

‘ಮತದಾನ ದಿನದ ಮಾಹಿತಿಗಿಂತ ನಂತರ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ 1.07 ಕೋಟಿ ಮತಗಳು ಹೆಚ್ಚಾಗಿವೆ. ಈವರೆಗೂ ಮತದಾನ ನಡೆದಿರುವ ಕ್ಷೇತ್ರಗಳಿಗೆ ತಲಾ 28 ಸಾವಿರ ಮತಗಳ ವ್ಯತ್ಯಾಸ ಕಂಡುಬಂದಿದೆ. ಇದು ಒಬ್ಬ ಅಭ್ಯರ್ಥಿಯ ಗೆಲುವು ಅಥವಾ ಸೋಲು ನಿರ್ಧರಿಸಲು ಸಾಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘7ನೇ ಹಂತ ಮತದಾನ ಮುಗಿಯುವ ಹೊತ್ತಿಗೆ ಈ ವ್ಯತ್ಯಾಸ 2 ಕೋಟಿ ದಾಟಲಿದೆ. ಇದನ್ನು ಈಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸದಿದ್ದಲ್ಲಿ, ಈ ದೇಶಕ್ಕೆ ನಾವು ಮಾಡುವ ಅನ್ಯಾಯವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.