ನವದೆಹಲಿ: ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಮೇಲೆ ಶುಕ್ರವಾರ ಹಲ್ಲೆ ನಡೆಸಿ, ಶಾಯಿ ಎರಚಲಾಗಿದೆ ಎಂದು ಆರೋಪಿಸಲಾಗಿದೆ.
ಉಸ್ಮಾನ್‌ಪುರದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿ ಹೊರಗೆ ಈ ಘಟನೆ ನಡೆದಿದೆ. ಪಾಲಿಕೆ ಸದಸ್ಯೆ ಛಾಯಾ ಶರ್ಮಾ ಅವರೊಂದಿಗೆ ಸಭೆ ನಡೆಸಿ, ಕಚೇರಿಯಿಂದ ಹೊರಗೆ ಬಂದ ವೇಳೆ ಕೆಲವರು ಹಲ್ಲೆ ನಡೆಸಿ, ಶಾಯಿ ಎರಚಿದ್ದಾರೆ ಎಂದು ಹೇಳಲಾಗಿದೆ.
‘ಕೆಲವರು ಸ್ಥಳಕ್ಕೆ ಬಂದು, ಕನ್ಹಯ್ಯ ಕುಮಾರ್ ಅವರಿಗೆ ಹೂಮಾಲೆ ಹಾಕಿದರು. ನಂತರ, ಕೆಲವರು ಅವರ ಮೇಲೆ ಶಾಯಿ ಎರಚಿ, ಹಲ್ಲೆ ನಡೆಸಲು ಯತ್ನಿಸಿದರು. ನಾನು ಮಧ್ಯಪ್ರವೇಶಿಸಿ ಹಲ್ಲೆ ತಡೆಯಲು ಯತ್ನಿಸಿದಾಗ ಕಿಡಿಗೇಡಿಗಳು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು’ ಎಂದು ಛಾಯಾ ಶರ್ಮಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕನ್ಹಯ್ಯ ಕುಮಾರ್,‘ಕ್ಷೇತ್ರದಲ್ಲಿ ನನ್ನ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಮನೋಜ್ ತಿವಾರಿ ಅವರೇ ಈ ದಾಳಿ ನಡೆಸುವಂತೆ ಕುಮ್ಮಕ್ಕು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ನನ್ನ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಹಾಲಿ ಸಂಸದ ತಿವಾರಿ, ನನ್ನ ಮೇಲೆ ಹಲ್ಲೆ ನಡೆಸಲು ಗೂಂಡಾಗಳನ್ನು ಕಳುಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಈ ರೀತಿಯ ಹಿಂಸಾ ಪ್ರವೃತ್ತಿಗೆ ಮೇ 25ರಂದು ಜನರು ಮತದಾನದ ಮೂಲಕ ಉತ್ತರ ನೀಡುವರು’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.