ನವದೆಹಲಿ: ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಏಪ್ರಿಲ್ 5ರಂದು ಬಿಡುಗಡೆ ಮಾಡುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಭಾನುವಾರ ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷವು ‘ಪಂಚ ನ್ಯಾಯ’, ‘25 ಗ್ಯಾರಂಟಿ’ಗಳನ್ನು ಈಗಾಗಲೇ ಘೋಷಿಸಿದೆ. ‘ಮನೆ ಮನೆ ಗ್ಯಾರಂಟಿ’ ಅಭಿಯಾನವು ಏಪ್ರಿಲ್ 3ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಬಿಜೆಪಿಯು ಕೊನೆಯ ಕ್ಷಣದಲ್ಲಿ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ. ಆ ಪಕ್ಷವು ಜನರನ್ನು ತಿರಸ್ಕಾರದಿಂದ ಕಾಣುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದರು. ಚುನಾವಣಾ ಪ್ರಣಾಳಿಕೆ ತಯಾರಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ಸಮಿತಿಯನ್ನು ಬಿಜೆಪಿ ಶನಿವಾರ ರಚಿಸಿತ್ತು.
ದೇಶದಾದ್ಯಂತ ಸಮಾಲೋಚನೆಗಳನ್ನು ನಡೆಸಿ ಕಾಂಗ್ರೆಸ್, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಇ ಮೇಲ್ ಹಾಗೂ ‘ಆವಾಜ್ ಭಾರತ್ ಕಿ’ ವೆಬ್‌ಸೈಟ್ ಮೂಲಕ ಇದಕ್ಕೆ ಸಾವಿರಾರು ಸಲಹೆಗಳು ಬಂದಿದ್ದವು. ಪಕ್ಷದ ಪ್ರಣಾಳಿಕೆಯು ಜನರ ಧ್ವನಿಯನ್ನು ಪ್ರತಿನಿಧಿಸಲಿದೆ ಎಂದು ಜೈರಾಮ್ ಬಣ್ಣಿಸಿದರು.
‘ಆದಾಯ ತೆರಿಗೆ ನೋಟಿಸ್ ನೀಡಿ ನಮ್ಮನ್ನು ಬೆದರಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ನಾವು ಬಗ್ಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.