ನವದೆಹಲಿ: ಭಾರತೀಯ ವಾಯುಪಡೆಯ (IAF ) ನಿವೃತ್ತ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಹಾಗೂ ತಿರುಪತಿಯ ಮಾಜಿ ಸಂಸದ, ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವರಪ್ರಸಾದ್ ರಾವ್ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
'ಸ್ವಾವಲಂಬನೆ ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳು ಶ್ಲಾಘನೀಯ. ಕಳೆದ 8 ರಿಂದ 10 ವರ್ಷಗಳ ಅವರ ಸೇವೆಯನ್ನು 'ಸುವರ್ಣ ಯುಗ' ಎಂದು ಭದೌರಿಯಾ ಬಣ್ಣಿಸಿದರು. ಮೋದಿಯವರ ದೂರದೃಷ್ಟಿ ಶ್ಲಾಘನೀಯ. ವಿವಿಧ ಇಲಾಖೆಗಳಲ್ಲಿ ಅವರು ತೆಗೆದುಕೊಂಡ ಕ್ರಮಗಳು ದೇಶವು ಬಲಿಷ್ಠವಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದೂ ಹೇಳಿದರು.
ಮಾಜಿ ಐಎಎಸ್ ಅಧಿಕಾರಿ ರಾವ್ ಮಾತನಾಡಿ, 'ಮೋದಿ ಅವರು ನಾನು ಕಂಡ ಅತ್ಯಂತ ಕ್ರಿಯಾತ್ಮಕ ರಾಜಕಾರಣಿ. ಅವರ ಸರ್ಕಾರದ ಅಭಿವೃದ್ಧಿ ಕ್ರಮಗಳು ಗಮನಾರ್ಹ' ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
'ಸರ್ಕಾರಿ ಸೇವೆಯಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಇಬ್ಬರು ನಾಯಕರು (ಭದೌರಿಯಾ ಹಾಗೂ ವರಪ್ರಸಾದ್ ರಾವ್) ರಾಷ್ಟ್ರಕ್ಕೆ ಕೊಡುಗೆ ನೀಡಲು ಬಿಜೆಪಿಯನ್ನು ಸೇರಿದ್ದಾರೆ' ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ಭಾರತೀಯ ವಾಯುಪಡೆಯಲ್ಲಿ ಭದೌರಿಯಾ ಅವರ ಸುದೀರ್ಘ ಸೇವೆಯನ್ನು ತಾವ್ಡೆ ಶ್ಲಾಘಿಸಿದರು. ರಕ್ಷಣಾ ಪಡೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ ಬಳಿಕ ರಾಜಕೀಯ ಕ್ಷೇತ್ರದಲ್ಲಿಯೂ ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಮೂಲದ ಭದೌರಿಯಾ ಅವರು ಐಎಎಫ್‌ನಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಅವರು ನಿವೃತ್ತಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.