ಭೋಪಾಲ್: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮಧ್ಯಪ್ರದೇಶದ ಅಮರವಾಡ ಶಾಸಕ ಕಾಮೇಶ್ ಶಾ (51) ಅವರು ಕಾಂಗ್ರೆಸ್ ತೊರೆದು ಶುಕ್ರವಾರ ಬಿಜೆಪಿ ಸೇರಿದ್ದಾರೆ.
ಅಮರವಾಡ, ಕಾಂಗ್ರೆಸ್ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ 'ಭದ್ರಕೋಟೆ' ಎನಿಸಿರುವ ಛಿಂದ್ವಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಶಾ ಅವರು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.
ಕಮಲನಾಥ್ ಅವರ ಕುಟುಂಬ ರಾಜಕಾರಣ ಮತ್ತು ಅಹಂಕಾರದ ವರ್ತನೆಯಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಹೇಳಿರುವ ಶಾ, ಇಡೀ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಪ್ರಭಾವ ಇದೆ ಎಂದಿದ್ದಾರೆ.
230 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಹೊಂದಿದೆ. ಶಾ ರಾಜೀನಾಮೆಯಿಂದಾಗಿ, ಕಾಂಗ್ರೆಸ್ ಸ್ಥಾನ 65ಕ್ಕೆ ಕುಸಿದಿದೆ.
'ಕಾಂಗ್ರೆಸ್ ಶಾಸಕ ನಮ್ಮ ಪಕ್ಷಕ್ಕೆ ಬಂದಿರುವುದರಿಂದ ದೊಡ್ಡ ಬಲ ಬಂದಂತಾಗಿದೆ' ಎಂದು ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಹೇಳಿದ್ದಾರೆ.
'ಬಿಜೆಪಿಗೆ ಕ್ಲೀನ್ ಸ್ವೀಪ್ ಗುರಿ'
29 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. 2019ರಲ್ಲಿ 28 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಛಿಂದ್ವಾರ ಮಾತ್ರ ದಕ್ಕಿರಲಿಲ್ಲ. ಆದರೆ, ಈ ಬಾರಿ ಶತಾಯಗತಾಯ ಇಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಅದಕ್ಕಾಗಿ, ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಬರೋಬ್ಬರಿ 50,000 ಕಾರ್ಯಕರ್ತರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಯೋಜನೆ ರೂಪಿಸಿರುವುದಾಗಿ ಇತ್ತೀಚೆಗಷ್ಟೇ ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದರು.
ಈ ಲೋಕಸಭೆ ಕ್ಷೇತ್ರಕ್ಕೆ 1997ರಲ್ಲಿ ನಡೆದ ಉಪಚುನಾವಣೆ ಹೊರತುಪಡಿಸಿ, 1952ರಿಂದ ಈವರೆಗೆ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಿದೆ. ಕಮಲನಾಥ್ ಅವರು, 1998ರಿಂದ 2014ರವರೆಗೆ 9 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಗೆದ್ದಿರುವ ಅವರ ಮಗ ನಕುಲ್ ನಾಥ್ ಮತ್ತೆ ಕಣದಲ್ಲಿದ್ದಾರೆ.
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಛಿಂದ್ವಾರ ಲೋಕಸಭೆ ವ್ಯಾಪ್ತಿಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ, ಬಿಜೆಪಿ ಯಾವ ಕ್ಷೇತ್ರದಲ್ಲೂ ಸುಲಭವಾಗಿ ಮಣಿದಿಲ್ಲ ಎಂಬುದು ಗಮನಾರ್ಹ. ಕಾಂಗ್ರೆಸ್, ಒಟ್ಟು 6,78,737 ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ, ಬಿಜೆಪಿ 5,81,091 ಮತ ಗಳಿಸಿದೆ.
ಛಿಂದ್ವಾರ ಸೇರಿದಂತೆ ಮಧ್ಯಪ್ರದೇಶದಲ್ಲಿರುವ ಒಟ್ಟು ಆರು ಲೋಕಸಭೆ ಸ್ಥಾನಗಳಿಗೆ ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ನಕುಲ್ ನಾಥ್ ಎದುರು ವಿವೇಕ್ ಬಂಟಿ ಸಾಹ ಅವರನ್ನು ಬಿಜೆಪಿ ನಿಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.