ADVERTISEMENT

LS Polls | ಮತದಾನದ ಮಾಹಿತಿ ಬಿಡುಗಡೆ ಕೋರಿದ್ದ ADR ಅರ್ಜಿ ವಿಚಾರಣೆ ಮೇ 17ರಂದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2024, 9:54 IST
Last Updated 13 ಮೇ 2024, 9:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಸಾರ್ವತ್ರಿಕ ಚುನಾವಣೆಯ ಪ್ರತಿ ಹಂತದ ಮುತದಾನ ಮುಗಿದ ಕೂಡಲೇ ಮತದಾನದ ಮಾಹಿತಿ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ನೇತೃತ್ವದ ಪೀಠ, ಅರ್ಜಿಯ ವಿಚಾರಣೆಯನ್ನು ಮೇ 17ರಂದು (ಶುಕ್ರವಾರ) ನಡೆಸುವುದಾಗಿ ಎಡಿಆರ್‌ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ ಅವರಿಗೆ ಹೇಳಿದೆ.

ADVERTISEMENT

ಪ್ರಶಾಂತ್ ಭೂಷಣ್‌ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು.

ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗೆ, ಪ್ರತಿಯೊಂದು ಮತಗಟ್ಟೆ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಚಲಾವಣೆಯಾದ ಮತಗಳ ಸಂಪೂರ್ಣ ಅಂಕಿ–ಅಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚನೆ ನೀಡಬೇಕು ಎಂದು ಎಡಿಆರ್‌ ತನ್ನ ಅರ್ಜಿಯಲ್ಲಿ ಕೋರಿದೆ.

ಚುನಾವಣಾ ಅಕ್ರಮಗಳಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ಮನವಿ ಸಲ್ಲಿಸಲಾಗಿದೆ ಎಂದು ಮನವರಿಕೆ ಮಾಡಿದೆ.

ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾನವು ಕ್ರಮವಾಗಿ ಏಪ್ರಿಲ್‌ 19 ಮತ್ತು ಏಪ್ರಿಲ್‌ 26ರಂದು ನಡೆದಿವೆಯಾದರೂ, ಏಪ್ರಿಲ್‌ 30 ರಂದು ಮತದಾನದ ಅಂಕಿ–ಅಂಶವನ್ನು ಪ್ರಕಟಿಸಲಾಗಿದೆ. ಅಂದರೆ ಮೊದಲ ಹಂತದ ಮತದಾನ ನಡೆದ 11 ದಿನಗಳು ಮತ್ತು ಎರಡನೇ ಹಂತದ ಮತದಾನ ನಡೆದ 4 ದಿನಗಳು ಮುಗಿದ ನಂತರ ಮಾಹಿತಿ ಬಿಡುಗಡೆಯಾಗಿದೆ.

ಇದನ್ನು ಉಲ್ಲೇಖಿಸಿರುವ ಎಡಿಆರ್, 'ಆಯೋಗವು ಮತದಾನ ನಡೆದ ದಿನ ಸಂಜೆ 7ಕ್ಕೆ ಘೋಷಿಸಿದ ಮತದಾನದ ಪ್ರಮಾಣ ಮತ್ತು ಏಪ್ರಿಲ್‌ 30 ರಂದು ಪ್ರಕಟಿಸಿರುವ ಪರಿಷ್ಕೃತ ಅಂಕಿ–ಅಂಶದ ನಡುವೆ ಭಾರಿ ವ್ಯತ್ಯಾಸ (ಶೇ 5 ರಿಂದ 6 ರಷ್ಟು) ಕಂಡುಬಂದಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ' ಎಂದು ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.