ನವದೆಹಲಿ: ಉತ್ತರ ಪ್ರದೇಶದಲ್ಲಿ 2012ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಪತನಮುಖಿಯಾಗುತ್ತ ಬಂದ ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‌ಪಿ) 2022ರ ಚುನಾವಣೆಯಲ್ಲಿ ಸಿಕ್ಕಿದ್ದು ಒಂದು ಸ್ಥಾನವಷ್ಟೇ. ಅಂದಿನಿಂದ ವಿಪಕ್ಷಗಳು ಬಿಎಸ್‌ಪಿಗೆ ‘ಬಿಜೆಪಿಯ ಬಿ–ಟೀಮ್’ ಎಂಬ ಹಣೆಪಟ್ಟಿಯನ್ನು ಅಂಟಿಸಿ ಹಂಗಿಸುತ್ತಾ ಬಂದಿವೆ. ಟೀಕೆ, ನಿಂದನೆ ಹಾಗೂ ಆರೋಪಗಳಿಗೆ ಪಕ್ಷದ ನಾಯಕಿ ಮಾಯಾವತಿ ಅವರದ್ದು ಮೌನವೇ ಉತ್ತರ. ಸಂಸದರು ಬೇರೆ ಪಕ್ಷಗಳ ಕಡೆಗೆ ಗುಳೆ ಹೊರಟಾಗಲೂ ತಲೆ ಕೆಡಿಸಿಕೊಂಡಿದ್ದು ಕಡಿಮೆ. ಪಕ್ಷದ ನೇತೃತ್ವವನ್ನು ತಮ್ಮ ಸೋದರಳಿಯ ಆಕಾಶ್ ಅವರಿಗೆ ಬಿಟ್ಟುಕೊಟ್ಟು ಸಾರ್ವಜನಿಕ ವೇದಿಕೆಗಳಿಂದ ದೂರ ಉಳಿದಿದ್ದರು. ಲೋಕಸಭಾ ಚುನಾವಣೆಯ ಪ್ರಚಾರ ಕಾವು ಪಡೆಯುತ್ತಿದ್ದಂತೆಯೇ ಮಾಯಾವತಿ ಅವರು ದಿಗ್ಗನೆದ್ದು ನಿಂತಿದ್ದಾರೆ.
ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಮಾಡಿರುವ ಜಾತಿ ಸಮೀಕರಣವು ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟಗಳ ಲೆಕ್ಕಾಚಾರವನ್ನು ಏರುಪೇರು ಮಾಡಲಿದೆ ಎಂಬ ಚರ್ಚೆಗಳು ನಡೆದಿವೆ. ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂಬ ‘ಅಸ್ತ್ರ’ವನ್ನೂ ದಲಿತ ನಾಯಕಿ ಪ್ರಯೋಗಿಸಿದ್ದಾರೆ.
ಮಾಯಾವತಿ ಅವರು ದಲಿತರ ಜತೆಗೆ ಯಾದವೇತರ ಹಿಂದುಳಿದ ಜಾತಿಗಳು, ಬ್ರಾಹ್ಮಣರು, ಮುಸ್ಲಿಮರನ್ನು ಒಲಿಸಿಕೊಂಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದವರು. 2007ರಲ್ಲಿ ಮಾಯಾವತಿ ಅವರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸಿದ್ದು ದಲಿತ–ಮುಸ್ಲಿಂ–ಬ್ರಾಹ್ಮಣ ಜಾತಿ ಸಮೀಕರಣ. ಪಕ್ಷವು ಕಳೆದೊಂದು ದಶಕದಲ್ಲಿ ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಾ ಬಂದಿದೆ. ಬ್ರಾಹ್ಮಣರು ಬಿಜೆಪಿ ತೆಕ್ಕೆಗೆ ಮರಳಿದ್ದಾರೆ. ಯಾದವೇತರ ಜಾತಿಗಳು ಪಕ್ಷದಿಂದ ದೂರ ಸರಿದಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. 2018ರಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಗೋರಖಪುರ ಹಾಗೂ ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಎದುರಿಸಿದ್ದವು. ಎರಡೂ ಪಕ್ಷಗಳು ಒಟ್ಟುಗೂಡಿ ಸ್ಪರ್ಧಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದವು.
2019ರ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳ ನಡುವಿನ ಮೈತ್ರಿ ಮುಂದುವರಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತುಂಗದ ಅಲೆಯ ನಡುವೆಯೂ ಪಕ್ಷವು 10 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಎಸ್‌ಪಿ ಐದರಲ್ಲಿ ಗೆದ್ದಿತ್ತು. ಬಳಿಕ ಉಭಯ ಪಕ್ಷಗಳು ಮೈತ್ರಿ ಮುರಿದುಕೊಂಡಿದ್ದವು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಇದರಿಂದಾಗಿ, ವಿಪಕ್ಷಗಳ ಮತ ವಿಭಜನೆಯಾಗಿ ಕಮಲ ಪಾಳಯಕ್ಕೆ ಅನುಕೂಲವಾಗಿತ್ತು. ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವಂತೆ ವಿರೋಧ ಪಕ್ಷಗಳ ನಾಯಕರು ಕಳೆದೊಂದು ವರ್ಷದಲ್ಲಿ ಹಲವು ಬಾರಿ ಮಾಯಾ ಅವರಿಗೆ ಆಹ್ವಾನ ನೀಡಿದ್ದರು. ‘ಇಂಡಿಯಾ’ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಅವರು ಹಲವು ಬಾರಿ ‘ಎಕ್ಸ್’ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದರು. ಸಾರ್ವಜನಿಕ ವೇದಿಕೆಗಳಿಂದಲೂ ದೂರ ಉಳಿದಿದ್ದರು.
ದಲಿತ–ಮುಸ್ಲಿಂ–ಒಬಿಸಿ ಸಂಯೋಜನೆ
ಉತ್ತರ ಪ್ರದೇಶದ 56 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪಕ್ಷ ಪ್ರಕಟಿಸಿದೆ. ಟಿಕೆಟ್ ಹಂಚಿಕೆಯಲ್ಲಿ ದಲಿತ–ಮುಸ್ಲಿಂ–ಒಬಿಸಿ ಸಂಯೋಜನೆಗೆ ಪಕ್ಷ ಒತ್ತು ಕೊಟ್ಟಿದೆ. ಬಿಎಸ್‌ಪಿಯ ಈ ಸಮೀಕರಣವು ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟಗಳ ತಲೆನೋವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಸುಮಾರು 45ರಷ್ಟು ಇತರ ಹಿಂದುಳಿದ ವರ್ಗದವರು (ಒಬಿಸಿ) ಇದ್ದಾರೆ. ಮುಸ್ಲಿಮರ ಜನಸಂಖ್ಯೆ ಶೇ 19ರಿಂದ 20ರಷ್ಟು ಇದೆ. ಪಕ್ಷವು ಮುಸ್ಲಿಂ ಸಮುದಾಯದ 14 ನಾಯಕರಿಗೆ ಟಿಕೆಟ್ ಕೊಟ್ಟಿದೆ. ಇದು ಎಸ್‌ಪಿಗಿಂತ ಜಾಸ್ತಿ. ರಾಜ್ಯದ ಪಶ್ಚಿಮ ಭಾಗದ ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪಕ್ಷವು ಮುಸ್ಲಿಂ ಸಮುದಾಯದ ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಇದರಿಂದಾಗಿ, ‘ಇಂಡಿಯಾ’ ಮೈತ್ರಿಕೂಟಕ್ಕೆ ಹೊಡೆತ ಬೀಳಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಇನ್ನೊಂದೆಡೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿನಿಧಿಸುತ್ತಿದ್ದ ಗೋರಖಪುರ ಕ್ಷೇತ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.
2017ರ ವಿಧಾನಸಭಾ ಚುನಾವಣೆಯಲ್ಲೂ ಮಾಯಾವತಿ ಇದೇ ರೀತಿಯ ಪ್ರಯೋಗ ಮಾಡಿದ್ದರು. ಆದರೆ, ಈ ಪ್ರಯೋಗ ಕೈಕೊಟ್ಟಿತ್ತು. ಪಕ್ಷದ ಚಿಹ್ನೆಯಡಿ 99 ಮುಸ್ಲಿಂ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮುಸ್ಲಿಂ ಮತಗಳು ಸಮಾಜವಾದಿ ಪಕ್ಷ–ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಎಸ್‌ಪಿ ನಡುವೆ ವಿಭಜನೆಯಾಗಿತ್ತು. ಬಿಜೆಪಿಯು 313 ಕ್ಷೇತ್ರಗಳಲ್ಲಿ ಗೆದ್ದಿತು. ಬಿಎಸ್‌ಪಿ 19 ಸ್ಥಾನಗಳಿಗಷ್ಟೇ ಸಮಾಧಾನಪಟ್ಟುಕೊಂಡಿತ್ತು.
ಕೆಲವು ತಿಂಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆಯ ನೆಪವೊಡ್ಡಿ ಸಂಸದ ಡ್ಯಾನಿಶ್ ಅಲಿ ಅವರನ್ನು ಮಾಯಾವತಿ ಪಕ್ಷದಿಂದ ಅಮಾನತು ಮಾಡಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಡಿಸಿದ ನಿರ್ಣಯವನ್ನು ಖಂಡಿಸಿದ್ದು ಡ್ಯಾನಿಶ್ ಮಾಡಿದ ತಪ್ಪಾಗಿತ್ತು. ಮಾಯಾವತಿ ನಡೆಗೆ ಟೀಕೆಗಳು ವ್ಯಕ್ತವಾಗಿದ್ದವು.
ಅಕ್ಬರ್‌ಪುರದಿಂದ ರಾಕೇಶ್ ದ್ವಿವೇದಿ, ಮಿರ್ಜಾಪುರದಿಂದ ಮನೀಶ್ ತ್ರಿಪಾಠಿ, ಉನ್ನಾವ್‌ನಿಂದ ಅಶೋಕ್ ಕುಮಾರ್ ಪಾಂಡೆ, ಫೈಜಾಬಾದ್‌ನಿಂದ ಸಚ್ಚಿದಾನಂದ ಪಾಂಡೆ, ಬಸ್ತಿಯಿಂದ ದಯಾಶಂಕರ್ ಮಿಶ್ರಾ ಸೇರಿದಂತೆ ಗಮನಾರ್ಹ ಸಂಖ್ಯೆಯ ಬ್ರಾಹ್ಮಣರಿಗೂ ಬಿಎಸ್‌ಪಿ ಟಿಕೆಟ್ ನೀಡಿದೆ. ಈ ಮೂಲಕ, ಬಿಜೆಪಿ ಮತಗಳಿಗೂ ಕನ್ನ ಹಾಕಬಹುದು ಎಂಬ ಚರ್ಚೆಗಳು ನಡೆದಿವೆ.
ಪ್ರತ್ಯೇಕ ರಾಜ್ಯ– ಸಹೋದರತ್ವದ ಮಾತು
ಆರ್ಥಿಕವಾಗಿ ಸಮೃದ್ಧವಾಗಿರುವ ರಾಜ್ಯದ ಪಶ್ಚಿಮ ಭಾಗವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇದೆ. ಈ ಬಗ್ಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಈ ಹಿಂದೆ ಧ್ವನಿ ಎತ್ತಿತ್ತು. ಇದೀಗ, ಮಾಯಾವತಿ ಅವರೂ ಇದೇ ಮಂತ್ರ ಪಠಿಸಲು ಆರಂಭಿಸಿದ್ದಾರೆ. ಈ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಜಾಟ್ ಹಾಗೂ ಮುಸ್ಲಿಂ ಮತಗಳನ್ನು ಸೆಳೆಯುವ ಉದ್ದೇಶದಿಂದ ಈ ಬಾಣ ಹೂಡಿದ್ದಾರೆ. ಜತೆಗೆ, ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಜಾಟ್–ಮುಸ್ಲಿಂ ಸಮುದಾಯಗಳ ಸಹೋದರತ್ವದ (ಬೈಚಾರ) ಅಗತ್ಯವನ್ನು ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ, ಪಕ್ಷದಿಂದ ದೂರ ಸರಿದಿರುವ ಸಮುದಾಯಗಳನ್ನು ಸೆಳೆಯಲು ಮತ್ತೆ ಕಸರತ್ತು ಆರಂಭಿಸಿದ್ದಾರೆ.
‘ಮಾಯಾ’ ಸ್ಥಾನಕ್ಕೆ ‘ರಾವಣ’ ಕಣ್ಣು
ಕಳೆದ ಎರಡು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷದ ನೀರಸ ಪ್ರದರ್ಶನದ ಬಳಿಕ ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಚಂದ್ರಶೇಖರ್ ಆಜಾದ್ ರಾವಣ ಅವರು ಉತ್ತರ ಪ್ರದೇಶದಲ್ಲಿ ಹೊಸ ಪೀಳಿಗೆಯ ದಲಿತ ನಾಯಕರಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ‘ರಾವಣ’ ಅವರ ವಾಕ್ಝರಿಗೆ ತಲೆದೂಗುವವರ ಸಂಖ್ಯೆ ದೊಡ್ಡದು. ಅವರು ಈ ಸಲ ನಗೀನಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವುದು ಅವರಿಗೂ ಅನಿವಾರ್ಯ. ಗೆದ್ದರೆ ದಲಿತ ನಾಯಕರಾಗಿ ಗುರುತಿಸಿಕೊಳ್ಳಲು ಹಾಗೂ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬುದು ಅವರ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.