ADVERTISEMENT

ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮತ ನೀಡಿ: ರೈತ ನಾಯಕ ರಾಕೇಶ್ ಟಿಕಾಯತ್ ಮನವಿ

ಪಿಟಿಐ
Published 24 ಮೇ 2024, 2:20 IST
Last Updated 24 ಮೇ 2024, 2:20 IST
<div class="paragraphs"><p>ರೈತರ ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತಿರುವ ರಾಕೇಶ್ ಟಿಕಾಯತ್</p></div>

ರೈತರ ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತಿರುವ ರಾಕೇಶ್ ಟಿಕಾಯತ್

   

ಪಿಟಿಐ ಸಂಗ್ರಹ ಚಿತ್ರ

ನೋಯ್ಡಾ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯವುಳ್ಳವರಿಗೆ ಜನರು ಮತ ಹಾಕಬೇಕು ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಗುರುವಾರ ಮನವಿ ಮಾಡಿದ್ದಾರೆ.

ADVERTISEMENT

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಭಾಗವಾಗಿರುವ ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರರಾಗಿರುವ ಟಿಕಾಯತ್‌, ಪ್ರಸ್ತುತ ಚುನಾವಣೆಯಲ್ಲಿ ಕಣಕ್ಕಿಳಿದಿರುವುದು ಬಿಜೆಪಿಯಲ್ಲ. ದೇಶವನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ 'ಬಂಡವಾಳಶಾಹಿಗಳ ಗುಂಪು' ಎಂದು ಆರೋಪಿಸಿದ್ದಾರೆ.

ಏಪ್ರಿಲ್‌ 19ರಂದು ಆರಂಭವಾದ ಲೋಕಸಭಾ ಚುನಾವಣೆಯ ಮೊದಲ 5 ಸುತ್ತಿನ ಮತದಾನ ದೇಶದಾದ್ಯಂತ ಪೂರ್ಣಗೊಂಡಿದೆ. 9 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 6 ಮತ್ತು 7ನೇ ಸುತ್ತಿನ ಮತದಾನ ಕ್ರಮವಾಗಿ ಮೇ 25 ಹಾಗೂ ಜೂನ್‌ 1ರಂದು ನಡೆಯಲಿವೆ. ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್‌, ಬಿಹಾರ, ಹಿಮಾಚಲ ಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಚಂಡೀಗಢ ಹಾಗೂ ಜಮ್ಮು ಮತ್ತು ಕಾಶ್ಮೀರ ಅಂತಿಮ ಹಂತದ ಮತದಾನಕ್ಕೆ ಸಾಕ್ಷಿಯಾಗಲಿವೆ.‌

ಚುನಾವಣೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟಿಕಾಯತ್, 'ಎರಡು ಹಂತದ ಮತದಾನ ಬಾಕಿ ಇದೆ. ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗಳಿಗೆ ಮತ ನೀಡುವಂತೆ ಎಸ್‌ಎಕ್‌ಎಂ ಸ್ಪಷ್ಟವಾಗಿ ಹೇಳಿದೆ. ಸದ್ಯ ಅಸ್ತಿತ್ವದಲ್ಲಿರುವುದು ಬಂಡವಾಳಶಾಹಿಗಳ ಗುಂಪಿನ ಸರ್ಕಾರವೇ ಹೊರತು ಬಿಜೆಪಿಯದ್ದಲ್ಲ. ದೇಶವನ್ನು ಆಕ್ರಮಿಸಿಕೊಂಡಿರುವ ಈ ಗುಂಪು, ಚುನಾವಣೆಯಲ್ಲಿ ಕಣಕ್ಕಿಳಿದಿದೆ. ಆದರೆ, ಯಾರೂ ಬೆಂಬಲ ನೀಡುತ್ತಿಲ್ಲ' ಎಂದು ಹೇಳಿದ್ದಾರೆ.

'ಇದು ದೇಶದ ಸಾರ್ವಜನಿಕರು ಮತ್ತು ಬಂಡವಾಳ ಶಾಹಿಗಳ ಗುಂಪಿನ ನಡುವಿನ ನೇರ ಚುನಾವಣೆಯಾಗಿದೆ. ಜನಸಾಮಾನ್ಯರು ಈ ಚುನಾವಣೆಯಲ್ಲಿ ಹೋರಾಡುತ್ತಿದ್ದಾರೆ. ಚಿಂತಿಸುವ ಅಗತ್ಯವಿಲ್ಲ. ನೀವು ಇರುವ ಸ್ಥಳದಲ್ಲಿ ಯಾವ ಅಭ್ಯರ್ಥಿ ಬಿಜೆಪಿಯನ್ನು ಸೋಲಿಸಬಲ್ಲ ಎಂದು ನಿಮಗೆ ಅನಿಸುತ್ತದೋ, ಅಂತಹವರಿಗೆ ಮತ ನೀಡಿ' ಎಂದು ಕರೆ ನೀಡಿದ್ದಾರೆ.

ಎಸ್‌ಕೆಎಂ ರಾಜಕೀಯೇತರ ಸಂಘಟನೆಯಾಗಿದ್ದು, ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದೆ ಎಂದೂ ಸ್ಪಷ್ಟಪಡಿಸಿರುವ ಟಿಕಾಯತ್‌, 'ನಾವು ಯಾರೊಬ್ಬರೊಂದಿಗೂ, ಯಾವುದೇ ವೈಯಕ್ತಿಕ ಸಮಸ್ಯೆಗಳನ್ನು ಹೊಂದಿಲ್ಲ. ಎಸ್‌ಕೆಎಂ ಹೇಳಬೇಕಿರುವುದು ಇದನ್ನೇ. ಅದು ಹರಿಯಾಣವಾಗಲಿ, ದೆಹಲಿ, ಪಂಜಾಬ್‌, ಉತ್ತರ ಪ್ರದೇಶ ಅಥವಾ ದೇಶದ ಬೇರೆ ಯಾವುದೇ ರಾಜ್ಯ ಇರಲಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲವರಿಗೆ ಮತ ನೀಡುವಂತೆ ಮೋರ್ಚಾ ಮಾರ್ಗಸೂಚಿ ನೀಡಿದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.