ADVERTISEMENT

ಲೋಕಸಭೆ ಚುನಾವಣೆ: ಗುಜರಾತ್‌ನ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ BJP

ಪಿಟಿಐ
Published 25 ಮಾರ್ಚ್ 2024, 4:14 IST
Last Updated 25 ಮಾರ್ಚ್ 2024, 4:14 IST
abhilash sd.
   abhilash sd.

ಅಹಮದಾಬಾದ್: ಪಕ್ಷ ಹೆಸರಿಸಿದ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದ ವಡೋದರ ಮತ್ತು ಸಾಬರ್‌ಕಾಂಠಾ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಿರುವ ಬಿಜೆಪಿ, ಗುಜರಾತ್‌ನಲ್ಲಿರುವ ಎಲ್ಲ ಲೋಕಸಭೆ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ.

ಬಿಜೆಪಿ ಆರು ಅಭ್ಯರ್ಥಿಗಳನ್ನೊಳಗೊಂಡ ಅಂತಿಮ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಮಹೇಂದ್ರ ಮುಂಜಪರ ಸೇರಿದಂತೆ ಐವರು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿದೆ.

ಲೋಕಸಭೆಯಲ್ಲಿ 26 ಸ್ಥಾನಗಳನ್ನು ಹೊಂದಿರುವ ಗುಜರಾತ್‌ನಲ್ಲಿ ಮೇ 7ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ADVERTISEMENT

ವಡೋದರ ಕ್ಷೇತ್ರದಿಂದ ಹಾಲಿ ಸಂಸದೆ ರಂಜನಾಬೆನ್‌ ಭಟ್ ಮತ್ತು ಸಾಬರ್‌ಕಾಂಠಾ ಕ್ಷೇತ್ರದ ಅಭ್ಯರ್ಥಿ ಭೀಖಾಜಿ ಠಾಕೂರ್ ಅವರನ್ನು ಬಿಜೆಪಿಯು ಈ ಮೊದಲು ನಾಮನಿರ್ದೇಶನ ಮಾಡಿತ್ತು. ಆದರೆ, ಅವರಿಬ್ಬರೂ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ, ಭಟ್ ಬದಲು ಹೇಮಂಗ್‌ ಜೋಶಿ ಮತ್ತು ಠಾಕೂರ್‌ ಬದಲಿಗೆ ಶೋಬನಾ ಬರೈಯಾ ಅವರ ಹೆಸರುಗಳನ್ನು ಹೊಸದಾಗಿ ಪ್ರಕಟಿಸಿದೆ.

ಜೋಶಿ ಅವರು ವಡೋದರ ನಗರ ಪಾಲಿಕೆ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಶೋಬನಾ, ‍ಪ್ರಣತಿಜ್‌ ಕ್ಷೇತ್ರದ ಮಾಜಿ ಶಾಸಕರ ಪತ್ನಿ.

ಉಳಿದಂತೆ ಜುನಗಢ ಸಂಸದ ರಾಜೇಶ್‌ ಚುದಾಸಮ ಅವರಿಗೆ ಮೂರನೇ ಬಾರಿಗೆ ಟಿಕೆಟ್‌ ನೀಡಲಾಗಿದೆ. ಸುರೇಂದ್ರನಗರ್‌ ಕ್ಷೇತ್ರದಿಂದ ಕೇಂದ್ರ ಸಚಿವ ಮಹೇಂದ್ರ ಬದಲು, ಮೊರ್ಬಿ ನಗರಸಭೆ ಮಾಜಿ ಅಧ್ಯಕ್ಷ ಚಂದು ಶಿಹೊರಾ ಅವರಿಗೆ ಮಣೆ ಹಾಕಲಾಗಿದೆ. ಮೆಹ್ಸಾನಾದಿಂದ ಸರ್ದಾರ್‌ಬೆನ್‌ ಪಟೇಲ್‌ ಬದಲು, ಪಕ್ಷದ ಕಾರ್ಯಕರ್ತ ಹರಿ ಪಟೇಲ್‌ಗೆ ಅವಕಾಶ ನೀಡಿದೆ.

ಅಮ್ರೇಲಿ ಕ್ಷೇತ್ರದಿಂದ ಮೂರು ಬಾರಿಯ ಸಂಸದ ನರನ್ ಕಚಾಡಿಯಾ ಬದಲು ಭರತ್‌ ಸುತಾರಿಯಾ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಸುತಾರಿಯಾ ಸದ್ಯ ಅಮ್ರೇಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್‌ ಇದುವರೆಗೆ 17 ಅಭ್ಯರ್ಥಿಗಳನ್ನು ಘೋಷಿಸಿದೆ. ಇಲ್ಲಿನ 24 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್‌, ಉಳಿದೆರಡು ಕ್ಷೇತ್ರಗಳನ್ನು 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷ ಎಎಪಿಗೆ ಬಿಟ್ಟುಕೊಟ್ಟಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 26 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.