ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು (ಜೂನ್ 4ರ) ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ‘ಹ್ಯಾಟ್ರಿಕ್‘ ಗೆಲುವಿನ ವಿಶ್ವಾಸದಲ್ಲಿದ್ದರೆ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಬಿಜೆಪಿಯು ಅಧಿಕಾರವನ್ನು ಉಳಿಸಿಕೊಂಡರೆ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆ ಸರಿಗಟ್ಟಲಿದ್ದಾರೆ. ನೆಹರೂ ತಮ್ಮ ಪಕ್ಷವನ್ನು ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದರು.
12 ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ‘ಹ್ಯಾಟ್ರಿಕ್‘ ಗೆಲುವಿನ ವಿಶ್ವಾಸದಲ್ಲಿದ್ದರೆ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.
ರಾಜ್ಯದ 28 ಕ್ಷೇತ್ರಗಳೂ ಸೇರಿ ದೇಶದ 542 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ 8,360 ಅಭ್ಯರ್ಥಿಗಳ ಭವಿಷ್ಯ ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದೆ.
'ಎಲ್ಲ ಕ್ಷೇತ್ರಗಳಲ್ಲೂ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಯಮಾನುಸಾರವಾಗಿ ಮತ್ತು ಪಾರದರ್ಶಕವಾಗಿ ಎಣಿಕೆ ಕಾರ್ಯ ನಡೆಯುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ' ಎಂದು ಮುಖ್ಯ ಚುನಾವಣಾ ಆಯುಕ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಆರಂಭಿಕ ಹಂತದ ಮತ ಎಣಿಕೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎ ಅಭ್ಯರ್ಥಿಗಳು 323 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಬಣದ ಅಭ್ಯರ್ಥಿಗಳು 138 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಸಿಕ್ಕಿಂನಲ್ಲಿರುವ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಸಾಧಿಸಿದೆ.
ಇಲ್ಲಿನ ವಿಧಾನಸಭಾ ಚುನಾವಣೆ ಫಲಿತಾಂಶ ಮೊನ್ನೆಯಷ್ಟೇ (ಜೂ. 2) ಪ್ರಕಟವಾಗಿದೆ. 32 ಕ್ಷೇತ್ರಗಳ ಪೈಕಿ 31ರಲ್ಲಿ ಗೆದ್ದು ಅಧಿಕಾರಕ್ಕೇರಿದೆ.
ಮಹಾರಾಷ್ಟ್ರ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿ, ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 17 ಕಡೆ ಮುಂದೆ ಇದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಎನ್‌ಸಿಪಿ (ಅಜಿತ್ ಪವಾರ್ ಬಣ) 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಮಹಾ ವಿಕಾಸ ಆಘಾಡಿ ಮೈತ್ರಿಕೂಟದಲ್ಲಿರುವ ಉದ್ಧವ್ ಠಾಕ್ರೆ ಬಣದ ಶಿವಸೇನಾ 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ, ಕಾಂಗ್ರೆಸ್ 7, ಎನ್‌ಸಿಬಿ (ಶರದ್ ಪವಾರ್ ಬಣ) 2 ಕಡೆ ಮುನ್ನಡೆ ಹೊಂದಿದೆ.
26 ಲೋಕಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಇಲ್ಲಿನ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 25ರಲ್ಲಿ 20 ಕಡೆ ಮುನ್ನಡೆ ಕಾಯ್ದುಕೊಂಡಿದೆ.
ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಆರಂಭಿಕ ಹಿನ್ನಡೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮುನ್ನಡೆಯಲ್ಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕನೌಜ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ ಗಾಂಧಿನಗರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ (ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ) ಮುನ್ನಡೆ ಗಳಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಅನಂತನಾಗ್– ರಾಜೌರಿ ಕ್ಷೇತ್ರಿಂದ ಕಣಕ್ಕಿಳಿದಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಾಗೂ ಬಾರಾಮುಲ್ಲಾದಲ್ಲಿ ಸ್ಪರ್ಧಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹಿನ್ನಡೆ ಅನುಭವಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 54,658 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
3ನೇ ಸುತ್ತಿನ ಮತ ಎಣಿಕೆ ಬಳಿಕ ಅವರಿಗೆ 1,34,457 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 79,700 ಮತ ಗಳಿಸಿದ್ದಾರೆ.
ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಎದುರು ಹಿನ್ನಡೆ ಅನುಭವಿಸಿದ್ದಾರೆ.
ಆರಂಭಿಕ ಹಂತದ ಮತ ಎಣಿಕೆ ಮಾಹಿತಿ ಪ್ರಕಾರ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಅಭ್ಯರ್ಥಿಗಳು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ತಮಿಳುನಾಡು, ಕೇರಳ ಮತ್ತು ಪಂಜಾಬ್‌ನಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.
ನರೇಂದ್ರ ಮೋದಿ (ಬಿಜೆಪಿ): ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಎದುರು 6,223 ಹಿನ್ನಡೆ
ಸ್ಮೃತಿ ಇರಾನಿ (ಬಿಜೆಪಿ): ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಎದುರು 3,916 ಮತಗಳ ಹಿನ್ನಡೆ
ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್ –ಎನ್‌ಸಿ): ಬಾರಾಮುಲ್ಲಾದಲ್ಲಿ ಪಕ್ಷೇತರ ಅಭ್ಯರ್ಥಿ ಶೇಖ್ ಅಬ್ದುಲ್ ರಶೀದ್ ಎದುರು 2,600 ಮತಗಳ ಹಿನ್ನಡೆ
ಮೆಹಬೂಬಾ ಮುಫ್ತಿ (ಪಿಡಿಪಿ): ಅನಂತನಾಗ್ –ರಾಜೌರಿ ಕ್ಷೇತ್ರದಲ್ಲಿ ಎನ್‌ಸಿ ಅಭ್ಯರ್ಥಿ ಮಿಯಾನ್ ಅಲ್ತಾಫ್ ಅಹ್ಮದ್ ಎದುರು 26,000 ಮತಗಳ ಹಿನ್ನಡೆ
ಮನೇಕಾ ಗಾಂಧಿ: ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಎಸ್‌ಪಿ ಅಭ್ಯರ್ಥಿ ರಾಮ್ ಭೌಲ್ ನಿಶಾದ್ ಎದುರು 1,872 ಮತಗಳ ಹಿನ್ನಡೆ
ಅರ್ಜುನ್ ರಾಮ್ ಮೇಘ್ವಾಲ್: ರಾಜಸ್ಥಾನದ ಬಿಕಾನೇರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೋವಿಮದ್ ರಾಮ್ ಮೇಘ್ವಾಲ್ ವಿರುದ್ಧ 5,222 ಮತಗಳ ಹಿನ್ನಡೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಮುನ್ನಡೆಯ ಕಾಯ್ದುಕೊಂಡಿದ್ದಾರೆ. ಹತ್ತಿರದ ಪ್ರತಿಸ್ಪರ್ಧಿ ಎದುರು 18,000 ಮತಗಳ ಅಂತರ ಹೊಂದಿದ್ದಾರೆ.
ಸಿಪಿಐ ನಾಯಕ ಅಣ್ಣೈ ರಾಜಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ರಾಹುಲ್‌ಗೆ ಪೈಪೋಟಿ ನೀಡುತ್ತಿದ್ದಾರೆ.
80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇದಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಸದ್ಯ 70 ಕ್ಷೇತ್ರಗಳ ಅಂಕಿ–ಅಂಶ ಲಭ್ಯವಾಗಿದ್ದು, ಈ ಪೈಕಿ ಎನ್‌ಡಿಎ ಬಣದ ಬಿಜೆಪಿ 34 ಕಡೆ ಮೇಲುಗೈ ಸಾಧಿಸುತ್ತಿದೆ. ಇಂಡಿಯಾ ಕೂಟದ ಎಸ್‌ಪಿ ಹಾಗೂ ಕಾಂಗ್ರೆಸ್ ಕ್ರಮವಾಗಿ 30 ಮತ್ತು 6 ಸ್ಥಾನಗಳಲ್ಲಿ ಮುನ್ನಡೆ ಗಳಿಸುತ್ತಿವೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾರಿ ಪೈಪೋಟಿಯೊಡ್ಡಿದ್ದಾರೆ. ಇಬ್ಬರ ನಡುವೆ ಅತ್ಯಲ್ಪ ಮತಗಳ ಅಂತರದ ಹಾವು–ಏಣಿ ಆಟ ಆರಂಭದಿಂದಲೂ ನಡೆಯುತ್ತಿದೆ.
ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ ತರೂರ್ ಅವರು 2,000 ಮತಗಳ ಮುನ್ನಡೆ ಸಾಧಿಸಿದ್ದಾರೆ.
ದೇಶದ ಗಮನ ಸೆಳೆದಿರುವ ಮಧ್ಯಪ್ರದೇಶದ ಛಿಂದ್ವಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ನಕುಲ್ ನಾಥ್ ಹಿನ್ನಡೆ ಅನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಕುಲ್‌ಗೆ ಬಿಜೆಪಿಯ ವಿವೇಕ್ ಬಂಟಿ ಸಾಹು ಎದುರು 3,806 ಮತಗಳ ಹಿನ್ನಡೆ ಎದುರಾಗಿದೆ.
ಕಮಲನಾಥ್ ಹಾಗೂ ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿರುವ ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಚುನಾವಣಾ ಪೂರ್ವದಲ್ಲಿ ಭಾರಿ ಕಸರತ್ತು ನಡೆಸಿತ್ತು.
ಖಾಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್, ಖದೂರ್ ಸಾಹಿಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕುಲ್ಬೀರ್ ಸಿಂಗ್ ಝರಾ ಎದುರು 30,987 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಬಿಜೆಪಿಯ ಸುಶೀಲ್ ರಿಂಕು ಎದುರು ಜಲಂಧರ್‌ನಲ್ಲಿ 38,642 ಮತಗಳ ಮುನ್ನಡೆ ಹೊಂದಿದ್ದಾರೆ.
ಆರಂಭಿಕ ಹಿನ್ನಡೆ ಅನುಭವಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿ ಕ್ಷೇತ್ರದಲ್ಲಿ ಮುನ್ನಡೆಯ ಹಾದಿಗೆ ಹೊರಳಿದ್ದಾರೆ. ಕಾಂಗ್ರೆಸ್‌ನ ಅಜಯ್ ರಾಯ್ ಎದುರು 21,629 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಮೇಠಿಯಲ್ಲಿ ಕಿಶೋರಿ ಲಾಲ್ ಶರ್ಮಾ ಎದುರು 19,177 ಮತಗಳ ಹಿನ್ನಡೆಯಾಗಿದೆ.
ಹಿಮಾಚಲಯ ಪ್ರದೇಶದ ಹಮೀರ್‌ಪುರದಿಂದ ಕಣಕ್ಕಿಳಿದಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸತ್‌ಪಾಲ್ ರೈಯಜಾದ ಎದುರು 65,336 ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಿ.ಎನ್.ಮಂಜುನಾಥ್ ಎದುರು ಅವರಿಗೆ 62,700 ಮತಗಳ ಹಿನ್ನಡೆ ಎದುರಾಗಿದೆ.
ಮಂಜುನಾಥ್ ಅವರಿಗೆ 2,03,411 ಮತಗಳು ಬಂದಿದ್ದರೆ, ಸುರೇಶ್‌ಗೆ 1,40,711 ಮತಗಳು ದೊರೆತಿವೆ.
ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಅಭ್ಯರ್ಥಿ ಯದವೇಂದ್ರ ರಾವ್ ಸಿಂಗ್ ಎದುರು 1.26 ಲಕ್ಷ ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು, ನಂತರ ಬಿಜೆಪಿ ಸೇರಿದ್ದರು.
ಉತ್ತರಾಖಂಡದ ಎಲ್ಲ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ನೈನಿತಾಲ್‌ನಲ್ಲಿ ಅಜಯ್ ಭಟ್, ಅಲ್ಮೋರಾದಲ್ಲಿ ಅಜಯ್ ತಮ್ಟಾ, ಗರ್ವಾಲ್‌ನಲ್ಲಿ ಅನಿಲ್ ಬಲೂನಿ, ಹರಿದ್ವಾರದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ತೆಹ್ರಿ ಗರ್ವಾಲ್‌ನಲ್ಲಿ ಎಂ.ಆರ್. ಲಕ್ಷ್ಮೀ ಶಾ ಮುನ್ನಡೆಯಲ್ಲಿದ್ದಾರೆ.
ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖರು ಜಯದತ್ತ ಸಾಗಿದ್ದಾರೆ.
ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಛಿಂದ್ವಾರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಳೆದ ಸಲ ಬಿಜೆಪಿ ಗೆದ್ದಿತ್ತು. ಈ ಬಾರಿ ಅಲ್ಲಿಯೂ ಕಮಲ ಅರಳುವ ಸೂಚನೆಗಳು ಸಿಕ್ಕಿವೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ 30,542 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ 37,033 ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲೂಕ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ದೇವಾಂಶು ಭಟ್ಟಾಚಾರ್ಯ 1,372 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್, ಖದೂರ್ ಸಾಹಿಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕುಲ್ಬೀರ್ ಸಿಂಗ್ ಝರಾ ಎದುರು 63,680 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಮೃತ್‌ಪಾಲ್ ಸದ್ಯ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾರೆ.
ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡೂ ಕಡೆ ಒಂದು ಲಕ್ಷಕ್ಕಿಂತ ಅಧಿಕ ಮತಗಳ ಮುನ್ನಡೆ ಸಾಧಿಸಿದ್ದಾರೆ.
ವಯನಾಡ್ 1.70 ಲಕ್ಷ ಹಾಗೂ ರಾಯಬರೇಲಿಯಲ್ಲಿ 1 ಲಕ್ಷ ಮತಗಳ ಅಂತರದಿಂದ ಮೇಲುಗೈ ಸಾಧಿಸಿದ್ದಾರೆ.
ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.
ಕಳೆದ ಚುನಾವಣೆಯಲ್ಲಿ 5.57 ಲಕ್ಷ ಮತಗಳಿಂದ ಗೆದ್ದಿದ್ದರು.
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ನೋಟಾ ಮತ ಪ್ರಯೋಗವಾಗಿದೆ. ಬರೋಬ್ಬರಿ 1.7 ಲಕ್ಷ ಮಂದಿ 'ಮೇಲಿನ ಯಾರೂ ಅಲ್ಲ – NOTA' ಆಯ್ಕೆ ಒತ್ತಿದ್ದಾರೆ.
ಚುನಾವಣೆ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಕೀಯವಾಗಿ ಮತ್ತು ನೈತಿಕವಾಗಿ ಆಘಾತಕಾರಿ ಸೋಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಸಂಜೆ 4 ಗಂಟೆಯ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 296 ಸ್ಥಾನಗಳು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 230 ಸ್ಥಾನಗಳಲ್ಲಿ ಹಾಗೂ ಇತರರು 17 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ 6,37,104 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಜಮ್ಮ ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಸೋಲು ಉಂಟಾಗಿದೆ. ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಒಮರ್ ಅಬ್ದುಲ್ಲಾ ಹಾಗೂ ಅನಂತ್‌ನಾಗ್–ರಜೌರಿ ಕ್ಷೇತ್ರದಿಂದ ಮೆಹಬೂಬಾ ಮುಫ್ತಿ ಸೋಲನುಭವಿಸಿದ್ದಾರೆ.
6 ಮತ್ತು 7ನೇ ಸುತ್ತಿನ ಮತ ಎಣಿಕೆ ಬಳಿಕ ಎನ್‌ಡಿಎಗೆ 290 ಸ್ಥಾನಗಳು ಬರಲಿವೆ ಎಂದು ಛತ್ತೀಸಗಢ ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ಹೇಳಿದ್ದಾರೆ.
Election Result | ಗಾಂಧಿನಗರ: ಅಮಿತ್ ಶಾಗೆ 7 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು
LS Result 2024: ಎನ್‌ಡಿಎನಲ್ಲೇ ಉಳಿಯುತ್ತೇವೆ ಎಂದ ಜೆಡಿಯು ನಾಯಕ ತ್ಯಾಗಿ
ಪ್ರಧಾನಿ ನರೇಂದ್ರ ಮೋದಿಗೆ ಗೆಲುವು
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಗೆಲುವು: 20 ವರ್ಷಗಳ ಬಳಿಕ ಎರಡನೇ ಅವಧಿಗೆ ಆಯ್ಕೆ
ಇವಿಎಂ ವಿರುದ್ಧ ಯಾವುದೇ ಹೋರಾಟವಿಲ್ಲ: ದಿಗ್ವಿಜಯ ಸಿಂಗ್
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ಯಾವುದೇ ಹೋರಾಟವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
‘ನೈತಿಕ ಸೋಲನ್ನು ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಈ ಕೂಡಲೇ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸಲು ಜೆಡಿಯು ಮತ್ತು ಟಿಡಿಪಿ ಪಕ್ಷಗಳನ್ನು ಸಂಪರ್ಕಿಸಬೇಕೆ? ಎನ್ನುವ ಬಗ್ಗೆ ಇಂಡಿಯಾ ಒಕ್ಕೂಟ ನಾಳೆ (ಜೂ.3) ಸಭೆ ಸೇರಿ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಸತತ ಮೂರನೇ ಬಾರಿ ಎನ್‌ಡಿಎ ಪಕ್ಷವನ್ನು ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆಯೋಗದ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 292, ಕಾಂಗ್ರೆಸ್ ನೇತೃತ್ವದ ಇಂಡಿಯಾ 233 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿವೆ. ಇತರರು 18 ಕ್ಷೇತ್ರಗಳಲ್ಲಿ ಇತರರು ಗೆಲುವು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.