ಹೈದರಾಬಾದ್: ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಬಂದರು, ವಿಮಾನ ನಿಲ್ದಾಣ ಮತ್ತು ರಕ್ಷಣಾ ಒಪ್ಪಂದಗಳಂತಹ ಹಲವಾರು ಯೋಜನೆಗಳನ್ನು ‘ಅದಾನಿಗೆ ನೀಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ರಾಹುಲ್ ಅವರು ಅದಾನಿ ಮತ್ತು ಅಂಬಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ತೆಲಂಗಾಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಅವರು ತಿರುಗೇಟು ನೀಡಿದರು.
‘ಪ್ರಧಾನಿ ಮೋದಿ ಅವರು ಇಡೀ ದೇಶದಲ್ಲಿ 20 ರಿಂದ 22 ಶ್ರೀಮಂತರ ಪರವಾಗಿ ಕೆಲಸ ಮಾಡಿ ಅವರನ್ನು ಶತಕೋಟ್ಯಧಿಪತಿಗಳನ್ನಾಗಿ ಮಾಡಿದ್ದಾರೆ. ಮೀಸಲಾತಿ ರದ್ದುಗೊಳಿಸಲು ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದರು’ ಎಂದು ದೂರಿದರು.
‘ಬಿಜೆಪಿಯು ಮೀಸಲಾತಿ ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮೀಸಲಾತಿಯ ಶೇ 50ರ ಮಿತಿಯನ್ನು ಹೆಚ್ಚಿಸಲು ಬಯಸುತ್ತದೆ’ ಎಂದರು.
ಬಿಜೆಪಿಗೆ ಆತಂಕ ಶುರುವಾಗಿದೆ– ಅಖಿಲೇಶ್: ‘ಅದಾನಿ–ಅಂಬಾನಿ’ ಹೇಳಿಕೆ ವಿಚಾರದಲ್ಲಿ ಪ್ರಧಾನಿಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಆತಂಕ ಶುರುವಾಗಿದೆ’ ಎಂದಿದ್ದಾರೆ.
ಉತ್ತರ ಪ್ರದೇಶದ ಬಹ್ರಾಯಿಚ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಅವರು ಕಳೆದ ದಿನ ಮಾಡಿದ ಭಾಷಣವನ್ನು ನೀವು ಕೇಳಿರಬಹುದು. ಇಷ್ಟು ದಿನ ಅವರು ಎಲ್ಲರ ಬಗ್ಗೆಯೂ ಕೆಟ್ಟ ಮಾತುಗಳನ್ನು ಆಡುತ್ತಿದ್ದರು. ಆದರೆ ಈಗ ತಮ್ಮದೇ ಮಂದಿಯ (ಅದಾನಿ ಮತ್ತು ಅಂಬಾನಿ) ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ. ಬಿಜೆಪಿಗೆ ಸೋಲಿನ ಆತಂಕ ಎದುರಾಗಿರುವುದು ಇದಕ್ಕೆ ಕಾರಣ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.