ಮುಂಬೈ: ಬಿಜೆಪಿಯು ಭವಿಷ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ‘ನಕಲಿ ಆರ್‌ಎಸ್‌ಎಸ್’ ಎಂದು ಕರೆಯಬಹುದು ಮತ್ತು ನಿಷೇಧಿಸಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇನ್ನು ಮುಂದೆ ‘ಆರ್‌ಎಸ್‌ಎಸ್ ಅಗತ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ. 100ನೇ ವರ್ಷಾಚರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕೂಡ ಅಪಾಯದಲ್ಲಿದೆ. ಮೋದಿ ಅವರು ಶಿವಸೇನಾವನ್ನು (ಯುಬಿಟಿ) ‘ನಕಲಿ ಸೇನಾ' ಎಂದು ಕರೆದಿದ್ದಾರೆ. ಜತೆಗೆ, ನನ್ನನ್ನು ಬಾಳಾಸಾಹೇಬ್ ಠಾಕ್ರೆಯವರ ‘ನಕಲಿ ಸಂತಾನ’ವೆಂದು ಅವಹೇಳನ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಆರ್‌ಎಸ್‌ಎಸ್‌ಗೂ ‘ನಕಲಿ’ ಎಂದು ಹಣೆಪಟ್ಟಿ ಕಟ್ಟಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿನ ತಮ್ಮ ರ್‍ಯಾಲಿಗಳಲ್ಲಿ ಮಾತನಾಡಿರುವ ಮೋದಿ, ನಮ್ಮನ್ನು ‘ನಕಲಿ ಶಿವಸೇನಾ’ ಎಂದು ಜರಿಯುತ್ತಿದ್ದಾರೆ. ಶಿವಸೇನಾ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದು ಚುನಾವಣೆಯ ನಂತರ ಸ್ಪಷ್ಟವಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಮೋದಿಯವರ ಬೆನ್ನಿಗೆ ದೃಢವಾಗಿ ನಿಂತಿದ್ದರು. ಆದರೆ, ಈಗ ಮೋದಿಯವರೇ ಶಿವಸೇನಾವನ್ನು ‘ನಕಲಿ’ ಎಂದು ಕರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು (ಮೋದಿ) ಆರ್‌ಎಸ್‌ಎಸ್ ಅನ್ನು ನಕಲಿ ಎಂದು ಕರೆಯಲು ಹಿಂಜರಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೆ.ಪಿ.ನಡ್ಡಾ, ‘ನಾವು ಚಿಕ್ಕವರಿದ್ದಾಗ ಕಡಿಮೆ ಸಾಮರ್ಥ್ಯ ಹೊಂದಿದ್ದೆವು. ಆಗ ಆರ್‌ಎಸ್‌ಎಸ್ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ, ಸಮರ್ಥರಾಗಿದ್ದೇವೆ. ಅದೇ ರೀತಿ ಬಿಜೆಪಿಯು ತಾನಾಗೇ ಮುನ್ನಡೆಯುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.