ADVERTISEMENT

Lok Saba Polls: ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್ ಚನ್ನಿ ರಾಜಸ್ಥಾನದಿಂದ ಕಣಕ್ಕೆ?

ಶಮಿನ್‌ ಜಾಯ್‌
Published 21 ಮಾರ್ಚ್ 2024, 6:20 IST
Last Updated 21 ಮಾರ್ಚ್ 2024, 6:20 IST
<div class="paragraphs"><p>ಚರಣ್‌ಜಿತ್ ಸಿಂಗ್ ಚನ್ನಿ </p></div>

ಚರಣ್‌ಜಿತ್ ಸಿಂಗ್ ಚನ್ನಿ

   

ನವದೆಹಲಿ: ಲೋಕಸಭಾ ಚುನಾವಣೆಗೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್‌ಚಿತ್ ಸಿಂಗ್ ಚನ್ನಿ ಅವರನ್ನು ರಾಜಸ್ಥಾನದ ಗಂಗಾನಗರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇದರ ಜೊತಗೆ ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಂಡ್‌ ಹಾಗೂ ಗುಜರಾತ್‌ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಅಖೈರುಗೊಳಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸೋನಿಯಾ ಗಾಂಧಿ, ಎಐಸಿಸಿ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್, ಕರ್ನಾಟಕ ಸಚಿವ ಕೆ.ಜೆ ಜಾರ್ಜ್ ಅವರು ಇದ್ದರು. ಈ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಹಾರಾಷ್ಟ್ರದ ಸೋಲಾಪುರದಿಂದ ಪರಿಣಿತಿ ಶಿಂದೆ, ಬುಧವಾರ ಕಾಂಗ್ರೆಸ್ ಸೇರಿದ್ದ ಬಿಜೆಪಿ ಶಾಸಕ ಜೈಪ್ರಕಾಶ್ ಪಟೇಲ್ ಅವರು ಜಾರ್ಖಂಡ್‌ನ ಹಜಾರಿಭಾಗ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ಸುಭೋದ್ ಕಾಂತ್ ಸಹಾಯ್‌ ಅವರ ಹೆಸರನ್ನು ರಾಂಚಿ ಲೋಕಸಭಾ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಪಂಜಾಬ್‌ ಗಡಿಗೆ ಹೊಂದಿಕೊಂಡಿರುವ ಮೀಸಲು ಕ್ಷೇತ್ರ ರಾಜಸ್ಥಾನದ ಗಂಗಾನಗರದಿಂದ ಚರಣ್‌ಜಿತ್‌ ಸಿಂಗ್‌ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಈ ಕ್ಷೇತ್ರದಲ್ಲಿ ಸಿಖ್ ಹಾಗೂ ದಲಿತರ ಮತ ಪ್ರಮಾಣ ಹೆಚ್ಚಿದೆ. ಸದ್ಯ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ.

ಈ ಹಿಂದೆ ಚನ್ನಿ ಜಲಂಧರ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಈ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷವು ಕಾಂಗ್ರೆಸ್‌ನಿಂದ ಕಿತ್ತುಕೊಂಡಿತ್ತು.

ಗುಜರಾತ್‌ ಶಾಸಕ ಜಿಗ್ನೇಶ್ ಮೆವಾನಿ ಜೈಪುರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳಿದ್ದು, ಯಾವುದೇ ಅಧಿಕೃತ ಹೇಳಿಕೆ ಇಲ್ಲ.

ಕಾಂಗ್ರೆಸ್ ಸೇರಿರುವ ಬಿಎಸ್‌ಪಿಯ ಉಚ್ಚಾಟಿತ ಸಂಸದ ದಾನಿಶ್ ಅಲಿ ಅವರು ತಾವು ಈಗ ಪ್ರತಿನಿಧಿಸುತ್ತಿರುವ ಅಮ್ರೋಹ ಕ್ಷೇತ್ರದಿಂದ ಟಿಕೆಟ್ ಪಡೆಯುವ ಸಾಧ್ಯತೆ ಇದೆ.

ಗುರುವಾರವೂ ಚುನಾವಣಾ ಸಮಿತಿ ಸಭೆ ಸೇರಿ, ತಮಿಳುನಾಡು, ಮಧ್ಯಪ್ರದೇಶ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.