ADVERTISEMENT

Arvind Kejriwal Bail Highlights | ಕೇಜ್ರಿವಾಲ್ ಬಿಡುಗಡೆ, ಪೀಠ ಹೇಳಿದ್ದೇನು?

ಚುನಾವಣಾ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಪಿಟಿಐ
Published 11 ಮೇ 2024, 0:30 IST
Last Updated 11 ಮೇ 2024, 0:30 IST
<div class="paragraphs"><p>ಜೈಲಿನಿಂದ ಹೊರಬಂದ ಬಳಿಕ ಅರವಿಂದ ಕೇಜ್ರಿವಾಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು </p></div>

ಜೈಲಿನಿಂದ ಹೊರಬಂದ ಬಳಿಕ ಅರವಿಂದ ಕೇಜ್ರಿವಾಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು

   

– ಪಿಟಿಐ ಚಿತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ತಿಹಾರ್‌ ಜೈಲಿನಿಂದ ಅವರು ಶುಕ್ರವಾರ ಸಂಜೆ ಹೊರಬಂದರು.

ADVERTISEMENT

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶದಿಂದ ಕೇಜ್ರಿವಾಲ್ ಮತ್ತು ಎಎಪಿ ಪಕ್ಷದ ಮುಖಂಡರು ನಿರಾಳರಾಗಿದ್ದಾರೆ.

ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು
ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ ನಡೆಸಿತು.

‘ಈ ಪ್ರಕರಣದಲ್ಲಿ ತಮ್ಮ ಪಾತ್ರದ ಕುರಿತು ಕೇಜ್ರಿವಾಲ್‌ ಯಾವುದೇ ಹೇಳಿಕೆ ನೀಡಬಾರದು. ಸಾಕ್ಷಿಗಳ ಜೊತೆ ಮಾತನಾಡಬಾರದು ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಕಡತವನ್ನು ಪಡೆದು, ಪರಿಶೀಲಿಸಬಾರದು’ ಎಂಬ ಷರತ್ತನ್ನೂ ಪೀಠ ವಿಧಿಸಿದೆ.

ಮಧ್ಯಂತರ ಜಾಮೀನು ನೀಡುವ ಮೂಲಕ ಕೇಜ್ರಿವಾಲ್‌ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವುದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ವಿರೋಧ
ವ್ಯಕ್ತಪಡಿಸಿತು.

‘ಇಂತಹ ಯಾವ ಪೂರ್ವ ನಿದರ್ಶನ ಇಲ್ಲದಿರುವಾಗ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವುದು ಸರಿಯಲ್ಲ’ ಎಂಬ ಇ.ಡಿ ವಾದವನ್ನು ಪೀಠ ತಳ್ಳಿಹಾಕಿತು.

‘ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವುದೆಂದರೆ, ದೇಶದ ಜನ
ಸಾಮಾನ್ಯರಿಗಿಂತ ರಾಜಕಾರಣಿಗಳಿಗೆ ಹೆಚ್ಚಿನ ಮಣೆ ಹಾಕಿದಂತಾಗುತ್ತದೆ ’ ಎಂಬ ಇ.ಡಿ ಪರ ವಕೀಲರ ವಾದವನ್ನು ಪೀಠ ಒಪ್ಪಲಿಲ್ಲ.

‘ಮಧ್ಯಂತರ ಜಾಮೀನು/ಬಿಡುಗಡೆ ಕುರಿತ ಪ್ರಶ್ನೆ ಎದುರಾದಾಗ, ಪ್ರಶ್ನೆಯ ಭಾಗವಾಗಿರುವ ವ್ಯಕ್ತಿ ಜೊತೆ ತಳಕು ಹಾಕಿಕೊಂಡಿರುವ ಸೂಕ್ಷ್ಮ ಸಂಗತಿಗಳು ಹಾಗೂ ಸಂದರ್ಭಗಳನ್ನು ನ್ಯಾಯಾಲಯ ಯಾವಾಗಲೂ ಪರಿಗಣಿಸುತ್ತದೆ. ಒಂದು ವೇಳೆ, ಇಂತಹ ಸಂಗತಿಗಳನ್ನು ನಿರ್ಲಕ್ಷಿಸಿದಲ್ಲಿ ಅದು ಅನ್ಯಾಯ ಹಾಗೂ ತಪ್ಪು ಆಗುತ್ತದೆ’ ಎಂದ ಪೀಠ, ‘ಲೋಕಸಭಾ ಚುನಾವಣೆಯು ಈ ವರ್ಷದ ಅತ್ಯಂತ ಮಹತ್ವದ ಸಂದರ್ಭವಾಗಿದೆ’ ಎಂದು ಹೇಳಿತು.

‘ಕೇಜ್ರಿವಾಲ್‌ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಲಾಗಿದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ಅವರಿಗೆ ಇನ್ನೂ ಶಿಕ್ಷೆ ವಿಧಿಸಿಲ್ಲ. ಅವರು ಅಪರಾಧ ಹಿನ್ನೆಲೆ ಹೊಂದಿಲ್ಲ ಹಾಗೂ ಅವರಿಂದ ಸಮಾಜಕ್ಕೆ ಯಾವುದೇ ಬೆದರಿಕೆಯೂ ಇಲ್ಲ’ ಎಂದು ಹೇಳಿತು.

‘ಅವರ ಬಂಧನ ಎಷ್ಟರ ಮಟ್ಟಿಗೆ ಕಾನೂನುಬದ್ಧ ಮತ್ತು ಸಿಂಧುವಾಗಿದೆ ಎಂಬುದನ್ನೇ ಈ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಪ್ರಕಟಿಸಬೇಕಿದೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಕೇಜ್ರಿವಾಲ್‌ ಅವರಿಗೆ 2023ರ ಅಕ್ಟೋಬರ್‌ನಲ್ಲಿ ಮೊದಲ ಸಮನ್ಸ್‌ ನೀಡಲಾಗಿತ್ತು. ನಂತರ 9 ನೋಟಿಸ್‌/ಸಮನ್ಸ್‌ಗಳನ್ನು ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂಬ ಇ.ಡಿ ವಾದ ಸರಿಯಾಗಿದೆ. ಇದು ಅವರ ಕುರಿತಾದ ಒಂದು ನಕಾರಾತ್ಮಕ ಅಂಶ. ಆದರೆ, ನಾವು ಗಮನ ಹರಿಸಬೇಕಾದ ಇತರ ಸಂಗತಿಗಳು ಸಾಕಷ್ಟಿವೆ. ಕೇಜ್ರಿವಾಲ್‌ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಪಕ್ಷವೊಂದರ ನೇತಾರ’ ಎಂದು ಪೀಠ ಹೇಳಿತು.

ಸಂಭ್ರಮ: ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುತ್ತಿದ್ದಂತೆಯೇ, ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಸಂಭ್ರಮ ಮನೆ ಮಾಡಿತ್ತು.‘ಇದು ಸತ್ಯಕ್ಕೆ ಸಂದ ಜಯ’ ಎಂದು ಎಎಪಿ ಬಣ್ಣಿಸಿದೆ.

‘ಹನುಮಾನ್‌ ಕೀ ಜೈ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ. ಲಕ್ಷಾಂತರ ಜನರ ಪ್ರಾರ್ಥನೆ ಮತ್ತು ಆಶೀರ್ವಾದದ ಫಲ. ಎಲ್ಲರಿಗೂ ಧನ್ಯವಾದಗಳು’ ಎಂದು ಕೇಜ್ರಿವಾಲ್‌ ಪತ್ನಿ ಸುನೀತಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಧ್ಯಂತರ ಜಾಮೀನಿನ ಹಿನ್ನೆಲೆಯಲ್ಲಿ ಜೈಲಿನಿಂದ ಕೇಜ್ರಿವಾಲ್‌ ಅವರ ಬಿಡುಗಡೆ ತಾತ್ಕಾಲಿಕವಾಗಿದ್ದರೂ, ಮೇ 25ರಂದು ದೆಹಲಿಯಲ್ಲಿನ ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ವೇಳೆ ಎಎಪಿಗೆ ಭಾರಿ ಬಲ ಸಿಕ್ಕಂತಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪೀಠ ಹೇಳಿದ್ದೇನು ?

*ಕೇಜ್ರಿವಾಲ್‌ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ 50 ದಿನಗಳು ಕಳೆದ ನಂತರ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌, 21 ದಿನಗಳ ಕಾಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ

*ಜೂನ್‌ 1ರವರೆಗೆ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಕೊನೆ ಹಂತದ ಮತದಾನ ಬಳಿಕ, ಜೂನ್‌ 2ರಂದು ಅವರು ಶರಣಾಗಬೇಕು ಎಂದು ಸೂಚಿಸಿದೆ

*₹50 ಸಾವಿರ ಮೊತ್ತದ ಬಾಂಡ್‌ ಹಾಗೂ ಜೈಲು ಸೂಪರಿಂಟೆಂಡೆಂಟ್‌ ಒಪ್ಪುವ ಮೊತ್ತದಷ್ಟು ಮತ್ತೊಂದು ಖಾತರಿ ಒದಗಿಸಬೇಕು ಎಂಬ ಷರತ್ತನ್ನೂ ಪೀಠ ವಿಧಿಸಿದೆ

*ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಕೇಜ್ರಿವಾಲ್‌ ಭೇಟಿ ನೀಡಬಾರದು. ಲೆಫ್ಟಿನೆಂಟ್ ಗವರ್ನರ್‌ ಅವರ ಒಪ್ಪಿಗೆ ಪಡೆಯಬೇಕಾದ ಕಡತ ಹೊರತುಪಡಿಸಿ ಸರ್ಕಾರದ ಬೇರೆ ಯಾವ ಕಡತಕ್ಕೂ ರುಜು ಹಾಕಬಾರದು ಎಂದು ಪೀಠ ಸೂಚಿಸಿದೆ

ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಟ: ಕೇಜ್ರಿವಾಲ್

ನವದೆಹಲಿ: ‘ನನ್ನೆಲ್ಲಾ ಶಕ್ತಿಯೊಂದಿಗೆ ಈ ನಿರಂಕುಶ ಪ್ರಭುತ್ವದ ವಿರುದ್ಧ ನಾನು ಹೋರಾಡುತ್ತಿದ್ದೇನೆ. ಆದರೆ, ನನ್ನ ಈ ಹೋರಾಟಕ್ಕೆ ದೇಶದ 140 ಕೋಟಿ ಜನರು ಕೈಜೋಡಿಸಬೇಕು’ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿದರು.

ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದ ನಂತರ ತಿಹಾರ್‌ ಜೈಲಿನಿಂದ ಶುಕ್ರವಾರ ಸಂಜೆ ಜೈಲಿನಿಂದ ಹೊರ ನಡೆದ ಅವರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಜೈಲಿನಿಂದ ಹೊರ ಬಂದ ಕೂಡಲೇ, ‘ಭಗವಾನ್‌ ಹನುಮಾನ್‌ಗೆ ಧನ್ಯವಾದ’ ಎಂದು ಉದ್ಗರಿಸಿದ ಅವರನ್ನು ಆಮ್‌ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಾದ್ಯಗಳ ಮೇಳ, ಜಯಘೋಷಗಳೊಂದಿಗೆ ಸ್ವಾಗತಿಸಿದರು.

ತಾವು ಪ್ರಯಾಣಿಸಿದ ಕಾರಿನ ಸನ್‌ರೂಫ್‌ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ‘ಭಾರತ್‌ ಮಾತಾ ಕಿ ಜೈ’, ‘ವಂದೇ ಮಾತರಂ’ ಹಾಗೂ ‘ಇನ್‌ಕ್ವಿಲಾಬ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗಿದರು.

‘ಶನಿವಾರ ಬೆಳಿಗ್ಗೆ 11ಕ್ಕೆ ಕನ್ಹಾಟ್‌ ಪ್ಲೇಸ್‌ನಲ್ಲಿರುವ ಹನುಮಾನ್‌ ದೇವಾಲಯಕ್ಕೆ ನಾನು ಭೇಟಿ ನೀಡುವೆ. ನಂತರ, ಪಕ್ಷದ ಕಚೇರಿಯಲ್ಲಿ ಮಧ್ಯಾಹ್ನ 1ಕ್ಕೆ ಪತ್ರಿಕಾಗೋಷ್ಠಿ ನಡೆಸುವೆ’ ಎಂದೂ ಕೇಜ್ರಿವಾಲ್‌ ಹೇಳಿದರು.

‘ನಾನು ಶೀಘ್ರವೇ ಜೈಲಿನಿಂದ ಹೊರಬರುತ್ತೇನೆ ಎಂದು ಹೇಳಿದ್ದೆ. ಈಗ ನಿಮ್ಮೊಂದಿಗೆ ಇರುವುದಕ್ಕಾಗಿ ನನಗೆ ಅತೀವ ಸಂಸತವಾಗುತ್ತಿದೆ. ಮೊತ್ತಮೊದಲಿಗೆ ನಾನು ಹನುಮಾನ್‌ ದೇವರಿಗೆ ಭಕ್ತಿಯಿಂದ ನಮಿಸುತ್ತೇನೆ. ಆಂಜನೇಯನ ಆಶೀರ್ವಾದದಿಂದಾಗಿಯೇ ನಾನೀಗ ನಿಮ್ಮ ನಡುವೆ ಇದ್ದೇನೆ’ ಎಂದು ಹೇಳಿದರು.

ಭಗವಾನ್‌ ಹನುಮಾನ್‌ಗೆ ಧನ್ಯವಾದ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ. ಈ ಹೋರಾಟದಲ್ಲಿ ಜನರು ಸಹಕಾರ ನೀಡಬೇಕು
-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ (ಜೈಲಿನಿಂದ ಹೊರಬಂದ ಬಳಿಕ)
ಅರವಿಂದ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಲಭಿಸಿರುವುದು ಖುಷಿ ತಂದಿದೆ. ಪ್ರಸಕ್ತ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬೆಳವಣಿಗೆ ಬಹಳ ಸಹಕಾರಿಯಾಗಲಿದೆ
–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿರುವುದನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದ ನಿಲುವು ದೃಢವಾಗಿರಲಿದೆ
–ಶರದ್‌ ಪವಾರ್‌, ಎನ್‌ಸಿಸಪಿ (ಶರದ್‌ಚಂದ್ರ ಪವಾರ್‌ ಬಣ)
ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಸುತ್ತಿರುವ ಹೋರಾಟವನ್ನು ಈಗ ಮತ್ತಷ್ಟು ತೀವ್ರಗೊಳಿಸಲಾಗುವುದು. ಅರವಿಂದ ಕೇಜ್ರಿವಾಲ್‌ ಒಬ್ಬ ವ್ಯಕ್ತಿಯಲ್ಲ, ಅವರು ವಿಚಾರಧಾರೆ ಇದ್ದಂತೆ. ಇಂತಹ ವಿಚಾರಧಾರೆಯನ್ನು ದೊಡ್ಡ ಮಟ್ಟದಲ್ಲಿ ಜನರ ಬಳಿ ಒಯ್ಯುತ್ತೇವೆ
–ಭಗವಂತ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.