ಮುಂಬೈ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಲೋಕಸಭಾ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಅವರನ್ನು ಸೋಲಿಸಲು ಶ್ರಮಿಸಿದರು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ರಾವುತ್ ಈ ಬಗ್ಗೆ ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಲೇಖನವೊಂದನ್ನು ಬರೆದಿದ್ದಾರೆ.
‘ನಾಗಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ನಿತಿನ್ ಗಡ್ಕರಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ಅರಿವಾದ ನಂತರ ಫಡಣವೀಸ್ ಅವರು ಒಲ್ಲದ ಮನಸ್ಸಿನಿಂದ ಅವರ ಪರ ಪ್ರಚಾರ ಮಾಡಿದರು. ಫಡಣವೀಸ್ ಗಡ್ಕರಿ ಅವರನ್ನು ಸೋಲಿಸಲು ಅವರ ವಿರೋಧಿಗಳಿಗೆ ನೆರವು ನೀಡಿದರು ಎಂಬುದಾಗಿ ನಾಗಪುರದ ಆರ್‌ಎಸ್‌ಎಸ್ ಮಂದಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಅಜಿತ್ ಪವಾರ್ ಅವರ ಎನ್‌ಸಿಪಿ ಅಭ್ಯರ್ಥಿಗಳನ್ನು ಸೋಲಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಪ್ರತಿ ಕ್ಷೇತ್ರದಲ್ಲಿ ₹25–30 ಕೋಟಿ ಹಂಚಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೋದಿ–ಶಾ ಅಧಿಕಾರಕ್ಕೆ ಮರಳಿದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬದಲಾಯಿಸುತ್ತಾರೆ’ ಎಂದು ಹೇಳಿದ್ದಾರೆ.
ಎಲ್ಲ ರಾವುತ್ ಭ್ರಾಂತಿ: ರಾವುತ್ ಅವರ ಆರೋಪಗಳನ್ನು ನಿರಾಕರಿಸಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ, ‘ಅದೆಲ್ಲ ಅವರ ಭ್ರಾಂತಿ’ ಎಂದಿದ್ದಾರೆ.
‘ಬಿಜೆಪಿ ಒಂದು ಪಕ್ಷವಲ್ಲ, ಒಂದು ಕುಟುಂಬ. ಸದಾಕಾಲ ಗುಂಪುಗಾರಿಕೆಯ ರಾಜಕಾರಣ ಮಾಡಿದವರಿಗೆ ಕೌಟುಂಬಿಕ ಸಂಬಂಧಗಳ ಬಗ್ಗೆ ಅರ್ಥವಾಗುವುದಿಲ್ಲ. ಮೋದಿ, ಶಾ, ಯೋಗಿ ಆದಿತ್ಯನಾಥ, ಗಡ್ಕರಿ ಎಲ್ಲರೂ ಬಿಜೆಪಿ ಕುಟುಂಬದ ಸದಸ್ಯರು. ನಾವು ಎಲ್ಲರೂ ಮೊದಲು ದೇಶಕ್ಕಾಗಿ, ನಂತರ ಪಕ್ಷಕ್ಕಾಗಿ, ಕೊನೆಯಲ್ಲಿ ಸ್ವಂತಕ್ಕಾಗಿ ಕೆಲಸ ಮಾಡುವವರು’ ಎಂದು ಪ್ರತಿಪಾದಿಸಿದ್ದಾರೆ.
‘ರಾವುತ್‌ಗೆ ಅಷ್ಟು ಧೈರ್ಯವಿದ್ದರೆ, 2019ರಲ್ಲಿ ತಾನು ಮುಖ್ಯಮಂತ್ರಿ ಆಗಲು ಹೇಗೆ ಪ್ರಯತ್ನ ಮಾಡಿದೆ ಎಂಬುದರ ಬಗ್ಗೆ ಒಂದು ಅಂಕಣ ಬರೆಯಲಿ’ ಎಂದು ಸವಾಲು ಹಾಕಿದ್ದಾರೆ.
ಮೈತ್ರಿ ಧರ್ಮ ಅಲ್ಲ: ರಾವುತ್ ಲೇಖನದ ವಿರುದ್ಧ ನಾಗಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಥಾಕರೆ ಕಿಡಿ ಕಾರಿದ್ದು, ‘ಗಡ್ಕರಿ ಅವರು ಗೆಲ್ಲುತ್ತಾರೆ ಎಂದು ರಾವುತ್ ಅವರಿಗೆ ಹೇಗೆ ಗೊತ್ತು? ಅವರೇನು ಜ್ಯೋತಿಷಿಯೇ? ಮಹಾವಿಕಾಸ ಅಘಾಡಿ (ಎಂವಿಎ) ಭಾಗವಾಗಿರುವ ರಾವುತ್ ಅವರು ತಮ್ಮ ಗಡ್ಕರಿ ಕುರಿತ ಪ್ರೇಮವನ್ನು ನಾಲ್ಕು ಗೋಡೆಗಳ ನಡುವೆ ಇಟ್ಟುಕೊಳ್ಳಲಿ’ ಎಂದು ಟೀಕಿಸಿದ್ದಾರೆ.
‘ಎಂವಿಎ ಕೂಟದ ಹಿರಿಯ ನಾಯಕ ಪತ್ರಿಕೆಯಲ್ಲಿ ಅಂಥ ವಿಚಾರಗಳ ಬಗ್ಗೆ ಲೇಖನ ಬರೆಯುವುದು ಮೈತ್ರಿ ಧರ್ಮವಲ್ಲ. ನಾವು ಬಿಜೆಪಿ ವಿರುದ್ಧ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಅವರು ಲೇಖನ ಬರೆಯುವ ಮುನ್ನ ನಾಗಪುರದ ಪರಿಸ್ಥಿತಿಯನ್ನು ಅವಲೋಕಿಸಬೇಕಿತ್ತು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.