ADVERTISEMENT

ರಾಯ್‌ಬರೇಲಿಗೆ ರಾಹುಲ್‌, ಅಮೇಠಿಗೆ ಶರ್ಮಾ

ಗಾಂಧಿ ಕುಟುಂಬದ ಆಪ್ತನ ನಿಷ್ಠೆಗೆ ‘ಕೈ’ ಪ್ರತಿಫಲ; ನಾಮಪತ್ರ ಸಲ್ಲಿಕೆ

ಪಿಟಿಐ
Published 3 ಮೇ 2024, 19:39 IST
Last Updated 3 ಮೇ 2024, 19:39 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   
25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಮೇಠಿಯಿಂದ ಸ್ಪರ್ಧಿಸುತ್ತಿಲ್ಲ. ಇದಕ್ಕೂ ಮುನ್ನ ನೆಹರೂ–ಗಾಂಧಿ ಕುಟುಂಬದ ನಿಷ್ಠಾವಂತ ಕ್ಯಾಪ್ಟನ್‌ ಸತೀಶ್‌ ಶರ್ಮಾ ಅವರು ಅಮೇಠಿಯಿಂದ 1991 ಹಾಗೂ 1996ರಲ್ಲಿ ಗೆದ್ದಿದ್ದರು. ಆದರೆ, ಅವರು 1998ರಲ್ಲಿ ಬಿಜೆಪಿಯ ಸಂಜಯ್‌ ಸಿಂಗ್ ವಿರುದ್ಧ ಪರಾಭವಗೊಂಡಿದ್ದರು. 1999ರಲ್ಲಿ ಸೋನಿಯಾ ಗೆದ್ದಿದ್ದರು. 2004ರಲ್ಲಿ ಅವರು ರಾಯ್‌ಬರೇಲಿಗೆ ಸ್ಥಳಾಂತರಗೊಂಡಿದ್ದರು. 

ನವದೆಹಲಿ: ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಅಮೇಠಿ ಕ್ಷೇತ್ರದಿಂದ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್‌ ಶರ್ಮಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಇಬ್ಬರೂ ನಾಮಪತ್ರ ಸಲ್ಲಿಸಿದರು. 

ಅಮೇಠಿ ಕ್ಷೇತ್ರದ ಕಾರ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಸೂಚನೆಯ ಮೇರೆಗೆ ಕಿಶೋರಿ ಲಾಲ್‌ ಶರ್ಮಾ ಅವರು 1987ರಲ್ಲಿ ಕ್ಷೇತ್ರಕ್ಕೆ ಬಂದಿಳಿದಿದ್ದರು. ಕಳೆದ 37 ವರ್ಷಗಳಿಂದ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬದ ಕಣ್ಣು ಹಾಗೂ ಕಿವಿಯಾಗಿದ್ದರು. ಅವರ ನಿಷ್ಠೆಗೆ ಈಗ ಪ್ರತಿಫಲ ಸಿಕ್ಕಿದೆ. 

ADVERTISEMENT

ಶರ್ಮಾ ಅವರು ಪಂಜಾಬ್‌ನ ಲುಧಿಯಾನ ಮೂಲದವರು. ಅವರು 1983ರಲ್ಲಿ ಮೊದಲ ಬಾರಿಗೆ ರಾಜೀವ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಮೊದಲು ಸತೀಶ್‌ ಶರ್ಮಾ ಅವರು ಎರಡು ಕ್ಷೇತ್ರಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. 1991ರಲ್ಲಿ ರಾಜೀವ್ ಹತ್ಯೆಯ ನಂತರ ಕುಟುಂಬದೊಂದಿಗೆ ಕಿಶೋರಿ ಲಾಲ್‌ ಸಂಬಂಧವು ಗಟ್ಟಿಯಾಯಿತು. ಆ ಬಳಿಕ ಸತೀಶ್‌ ಶರ್ಮಾ ಜಾಗಕ್ಕೆ ಕಿಶೋರಿ ಲಾಲ್‌ ಬಂದರು. ಅಂದಿನಿಂದ ಉಭಯ ಕ್ಷೇತ್ರಗಳ ಮೇಲ್ವಿಚಾರಣೆಯನ್ನು ಕಿಶೋರಿ ಲಾಲ್ ನೋಡಿಕೊಳ್ಳುತ್ತಿದ್ದರು. 

2019ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್‌ ಅವರು 55 ಸಾವಿರ ಮತಗಳ ಅಂತರದಿಂದ ಸೋತಿದ್ದರು. ‘ಶರ್ಮಾ ಅವರು ಹೊಣೆಯನ್ನು ಸರಿಯಾಗಿ ನಿಭಾಯಿಸಿಲ್ಲ. ರಾಹುಲ್ ಸೋಲಿಗೆ ಶರ್ಮಾ ಅವರೇ ಕಾರಣ’ ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಟೀಕಿಸಿದ್ದರು. ಆ ಸಂದರ್ಭದಲ್ಲಿ ಶರ್ಮಾ ಬೆನ್ನಿಗೆ ಗಾಂಧಿ ಕುಟುಂಬದವರು ನಿಂತಿದ್ದರು. 

ಪಕ್ಷವು ಆರಂಭದಲ್ಲಿ ಸುಪ್ರಿಯಾ ಶ್ರೀನೆತ್ ಅಥವಾ ಸತೀಶ್‌ ಶರ್ಮಾ ಪುತ್ರಿಯನ್ನು ಕಣಕ್ಕಿಳಿಸಲು ಯೋಜಿಸಿತ್ತು. ಬಳಿಕ ಆ ಪ್ರಸ್ತಾವ ಕೈಬಿಟ್ಟಿತ್ತು. ಮೂರು ದಿನಗಳ ಹಿಂದೆ ಶರ್ಮಾ ಅವರನ್ನು ನವದೆಹಲಿಗೆ ಕರೆಸಿಕೊಂಡಿದ್ದ ಗಾಂಧಿ ಕುಟುಂಬದವರು ಅಮೇಠಿಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವಂತೆ ಸೂಚಿಸಿದ್ದರು. ರಾಹುಲ್‌ ಹಾಗೂ ಪ್ರಿಯಾಂಕಾ ಅವರು ವ್ಯಾಪಕ ಪ್ರಚಾರ ನಡೆಸಿದರೆ ಸ್ಪರ್ಧಿಸಲು ಸಿದ್ಧ ಎಂದು ಶರ್ಮಾ ತಿಳಿಸಿದ್ದರು. 

ನಾಮಪತ್ರ ಸಲ್ಲಿಸಿದ ಬಳಿಕ ಶರ್ಮಾ ಜತೆಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್‌ಶೋ ನಡೆಸಿದರು. 

‘ಕಿಶೋರಿ ಲಾಲ್ ಅವರು ಅಮೇಠಿಯ ಮೂಲೆ ಮೂಲೆಗೂ ಪರಿಚಿತರು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಗೊತ್ತು. ಅವರಿಗೆ ಈ ಕ್ಷೇತ್ರದ ಸಮಸ್ಯೆಗಳ ಅರಿವಿದೆ. ಅವರು ಈ ಸಲ ಗೆಲುವು ಸಾಧಿಸಲಿದ್ದಾರೆ’ ಎಂದು ಪ್ರಿಯಾಂಕಾ ವಿಶ್ವಾಸ ವ್ಯಕ್ತಪಡಿಸಿದರು.

ಅಮೇಠಿಯಲ್ಲಿ ಚುನಾವಣಾ ಕಣದಲ್ಲಿ ಗಾಂಧಿ ಕುಟುಂಬ ಇಲ್ಲದಿರುವುದು ಮತದಾನಕ್ಕೂ ಮುನ್ನವೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ
ಸ್ಮೃತಿ ಇರಾನಿ, ಅಮೇಠಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಸೋಲಿನ ಭೀತಿಯಿಂದ ಎರಡು ಕಡೆ ಸ್ಪರ್ಧೆ: ಬಿಜೆಪಿ  

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಂತ ಕಳಪೆ ಸಾಧನೆ ಮಾಡಲಿದೆ. ಕೇರಳದ ವಯನಾಡಿನಲ್ಲಿ ಸೋಲನ್ನು ಮನಗಂಡಿರುವ ರಾಹುಲ್‌ ಗಾಂಧಿ ರಾಯ್‌ಬರೇಲಿಯಿಂದ ಕಣಕ್ಕೆ ಇಳಿದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. 

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸೋಲಿನ ಬಗ್ಗೆ ಹಿಂದೆಯೇ ಹೇಳಿದ್ದೆ. ಯಾವುದೇ ಮತಗಟ್ಟೆ ಸಮೀಕ್ಷೆಯ ಅಗತ್ಯವಿಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕಿ ಲೋಕಸಭಾ ಸ್ಥಾನವನ್ನು ತೊರೆದು ರಾಜಸ್ಥಾನದ ರಾಜ್ಯಸಭೆ ಸ್ಥಾನದ ಮೂಲಕ ಸಂಸತ್‌ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ ಸೋಲನ್ನು ಗ್ರಹಿಸಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದರು. 

‘ಅಮೇಠಿಯಲ್ಲಿ ಪರಾಭವಗೊಂಡ ಬಳಿಕ ವಯನಾಡಿಗೆ ಹೋಗಿದ್ದ ಕಾಂಗ್ರೆಸ್‌ನ ರಾಜಕುಮಾರ ಈಗ ರಾಯ್‌ಬರೇಲಿ
ಯಿಂದಲೂ ಕಣಕ್ಕಿಳಿದಿದ್ದಾರೆ. ಅವರು ವಯನಾಡಿನಲ್ಲೂ ಸೋಲಲಿದ್ದಾರೆ’ ಎಂದರು. ‘ರಾಹುಲ್‌ ಈ ಬಾರಿ ದಕ್ಷಿಣದಲ್ಲೂ ಸೋಲು ಅನುಭವಿಸಲಿದ್ದಾರೆ. ಹೀಗಾಗಿ ಅವರಿಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುವುದೇ ಕಾಯಂ ಆಗಲಿದೆ. ಓಡು ರಾಹುಲ್‌ ಓಡು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಕುಮಾರ್ ಗೌತಮ್‌ ಲೇವಡಿ ಮಾಡಿದರು. 

ರಾಯ್‌ಬರೇಲಿಯಲ್ಲಿ ಸ್ಪರ್ಧೆ ಏಕೆ? 

ಸೋನಿಯಾ ಗಾಂಧಿ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಸ್ಮೃತಿ ಇರಾನಿ ಅವರೊಂದಿಗೆ ದಿನನಿತ್ಯ ಮಾತಿನ ಚಕಮಕಿಯಲ್ಲಿ ತೊಡಗುವುದನ್ನು ತಪ್ಪಿಸಿ, ಲೋಕಸಭಾ ಚುನಾವಣಾ ಪ್ರಚಾರ ದಿಕ್ಕುತಪ್ಪದಂತೆ ನೋಡಿಕೊಳ್ಳುವ ಸಲುವಾಗಿ ರಾಹುಲ್‌ ಗಾಂಧಿ ಅವರು ಅಮೇಠಿ ಬದಲು ರಾಯ್‌ಬರೇಲಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 

ಪ್ರಿಯಾಂಕಾ ಗಾಂಧಿ ಅವರು ಸಾಕಷ್ಟು ಒತ್ತಡ ಹಾಗೂ ಒತ್ತಾಯದ ನಂತರವೂ ರಾಯ್‌ ಬರೇಲಿ ಅಥವಾ ಅಮೇಠಿಯಿಂದ ಕಣಕ್ಕಿಳಿಯಲು ನಿರಾಕರಿಸಿದ ನಡೆ ಕೂಡ ರಾಹುಲ್‌ ನಿರ್ಧಾರದ ಮೇಲೆ ಪ್ರಭಾವ ಬೀರಿದೆ. ಈ ನಿರ್ಧಾರದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗಾಂಧಿ ಕುಟುಂಬ ಹಾಗೂ ಪಕ್ಷದ ನಾಯಕರಿಗೂ ಅರಿವಿದೆ. ಸೋಲಿನ ಭಯದಿಂದ ಅಮೇಠಿಯಿಂದ ರಾಹುಲ್‌ ಓಡಿಹೋಗಿದ್ದಾರೆ ಎಂಬ ಆರೋಪ ಬರಲಿದೆ. ಆದರೆ, ಈ ದಾಳಿಯನ್ನು ಎದುರಿಸಲು ಪಕ್ಷ ಸಿದ್ಧವಿದೆ ಎಂದು ‘ಕೈ’ ನಾಯಕರು ಹೇಳುತ್ತಾರೆ. 

ಕುಟುಂಬದ ಭದ್ರಕೋಟೆಯಲ್ಲಿ ರಾಹುಲ್ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ತಾರಾ ಪ್ರಚಾರಕಿಯಾಗಿ ತಮ್ಮ ಪಾತ್ರ ಮಹತ್ವದ್ದು ಎಂಬುದಾಗಿ ಪ್ರಿಯಾಂಕಾ ಅವರು ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದಾರೆ. ಕಾಂಗ್ರೆಸ್‌ ವಂಶಾಡಳಿತ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2014 ಹಾಗೂ 2019ರ ಚುನಾವಣೆಗಳಲ್ಲಿ ದೂಷಿಸಿದ್ದರು. ಈ ಸಲದ ಚುನಾವಣೆಯಲ್ಲಿ ವಂಶಾಡಳಿತ ರಾಜಕಾರಣ ಪ್ರಮುಖ ಚುನಾವಣಾ ವಿಷಯವಾಗಿಲ್ಲ. ರಾಹುಲ್‌ ಹಾಗೂ ಪ್ರಿಯಾಂಕಾ ಇಬ್ಬರೂ ಸ್ಪರ್ಧಿಸಿದರೆ ಮೋದಿ ಅವರಿಗೆ ಅಸ್ತ್ರ ನೀಡಿದಂತೆ ಆಗುತ್ತದೆ. ಪ್ರಿಯಾಂಕಾ ಸ್ಪರ್ಧಿಸದೆ ಇರಲು ಇದೂ ಒಂದು ಕಾರಣ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳುತ್ತಾರೆ. 

‘ನಾನು ಈ ಬಾರಿ ಚುನಾವಣೆ‌ಗೆ ಸ್ಪರ್ಧಿಸುವುದಿಲ್ಲ ಹಾಗೂ ಪ್ರಚಾರದತ್ತ ಗಮನಹರಿಸಲು ಬಯಸುತ್ತೇನೆ’ ಎಂದು ಪ್ರಿಯಾಂಕಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರಿಗೆ ಎರಡು ತಿಂಗಳ ಹಿಂದೆಯೇ ತಿಳಿಸಿದ್ದರು. ಪ್ರಿಯಾಂಕಾ ಮನವೊಲಿಸುವ ಪ್ರಯತ್ನವನ್ನು ಹಿರಿಯ ನಾಯಕರು ಮಾಡಿದ್ದರು. ಪ್ರಿಯಾಂಕಾ ಸ್ಪರ್ಧಿಸಿದರೆ ಉತ್ತರ ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದೂ ಅವರು ಗಮನಕ್ಕೆ ತಂದಿದ್ದರು. ಆದರೆ, ಪ್ರಿಯಾಂಕಾ ನಿಲುವು ಬದಲಿಸಿಲ್ಲ. ರಾಹುಲ್ ಅವರು ಎರಡು
ಕ್ಷೇತ್ರಗಳಲ್ಲಿ ಗೆದ್ದರೆ ಉಪಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆ ಇದೆ. 

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 17 ಕ್ಷೇತ್ರಗಳನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಒಂದು ಷರತ್ತು ಹಾಕಿದ್ದರು. ರಾಜ್ಯದ ಕ್ಷೇತ್ರವೊಂದರಲ್ಲಿ ಗಾಂಧಿ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸಬೇಕು ಎಂಬುದು ಅವರ ಷರತ್ತಾಗಿತ್ತು. ಜತೆಗೆ, ಉತ್ತರ ಭಾರತದಲ್ಲಿ ಗಾಂಧಿ ಕುಟುಂಬದವರು ಸ್ಪರ್ಧಿಸದಿದ್ದರೆ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದಕ್ಷಿಣ ಭಾರತದ ಪಕ್ಷ ಎಂಬ ಹಣೆಪಟ್ಟಿ ಅಂಟಿಕೊಳ್ಳಲಿದೆ. ಕಾರ್ಯಕರ್ತರ
ಆತ್ಮ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂಬ ಕಾರಣಕ್ಕೆ ಎರಡು ಕ್ಷೇತ್ರ
ಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ರಾಹುಲ್‌ ಬಂದರು ಎಂದು
ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.