ADVERTISEMENT

LS Polls 2024 | ರಾಯ್‌ಬರೇಲಿ–ವಯನಾಡ್‌: ರಾಹುಲ್‌ ಆಯ್ಕೆಗೆ ಕೆಲವೇ ದಿನಗಳ ಅವಕಾಶ

ಶಮಿನ್‌ ಜಾಯ್‌
Published 6 ಜೂನ್ 2024, 10:30 IST
Last Updated 6 ಜೂನ್ 2024, 10:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಯಾರು? ಮತ್ತು ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಯಾವುದನ್ನು ಉಳಿಸಿಕೊಳ್ಳುತ್ತಾರೆ... ರಾಯ್‌ಬರೇಲಿ ಅಥವಾ ವಯನಾಡ್‌. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತುರ್ತಾಗಿ ಎರಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. 

ವಿರೋಧ ಪಕ್ಷದ ನಾಯಕನ ಸ್ಥಾನವನ್ನು ರಾಹುಲ್ ವಹಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್‌ನ ಅಪೇಕ್ಷೆಯಾಗಿದೆ. ಆದರೆ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬುದರ ಕುರಿತು ಕಾಂಗ್ರೆಸ್‌ ಒಳಗೇ ಬಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಹಿಂದಿ ಭಾಷಿಕ ಪ್ರದೇಶದಲ್ಲಿ ಪಕ್ಷದ ಪ್ರಾಬಲ್ಯವನ್ನು ಹೆಚ್ಚಿಸಲು ರಾಯ್‌ಬರೇಲಿಯನ್ನು ರಾಹುಲ್ ಉಳಿಸಿಕೊಳ್ಳಬೇಕು ಎಂಬ ಕೂಗು ಹೆಚ್ಚಾಗಿದೆ.

ಆದಾಗ್ಯೂ, ಯಾವುದೇ ಸಾಂವಿಧಾನಿಕ ಹುದ್ದೆಯಿಂದ ರಾಹುಲ್ ಗಾಂಧಿ ಈವರೆಗೂ ದೂರವೇ ಇದ್ದಾರೆ. 2014 ಹಾಗೂ 2019ರ ಲೋಕಸಭೆಯಲ್ಲಿ ಅವರೊಬ್ಬ ಕಾಂಗ್ರೆಸ್ ಸಂಸದ ಎಂದಷ್ಟೇ ಗುರುತಿಸಿಕೊಂಡಿದ್ದಾರೆ. ಆದರೆ ಅಗತ್ಯವಿರುವಷ್ಟು ಸಂಖ್ಯಾಬಲ ಇಲ್ಲದ ಕಾರಣದಿಂದಲೂ ಅವರು ಆ ಹುದ್ದೆ ಕೇಳಲು ಸಾಧ್ಯವಿರಲಿಲ್ಲ.

ADVERTISEMENT

ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು 2014 ಹಾಗೂ 2019ರಲ್ಲಿ ಕಾಂಗ್ರೆಸ್‌ 54 ಸೀಟುಗಳಿಗಿಂತ ಕಡಿಮೆ ಸ್ಥಾನಗಳನ್ನು ಹೊಂದಿತ್ತು. ಎರಡೂ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನಮಾನ ನೀಡಲು ನರೇಂದ್ರ ಮೋದಿ ಸರ್ಕಾರ ನಿರಾಕರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ 99 ಸ್ಥಾನಗಳನ್ನು ಪಡೆದು, ಅತಿ ಹೆಚ್ಚು ಸ್ಥಾನ ಪಡೆದ 2ನೇ ಅತಿ ದೊಡ್ಡ ಪಕ್ಷವಾಗಿದೆ. ಹೀಗಾಗಿ ಸಹಜವಾಗಿ ವಿರೋಧ ಪಕ್ಷದ ಸ್ಥಾನ ಅದಕ್ಕೆ ಈ ಬಾರಿ ಸಿಗಲಿದೆ.

ಆ ಪಕ್ಷದ ಮುಖಂಡರು ರಾಹುಲ್ ಅವರನ್ನೇ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕು ಎಂದು ಹೇಳುತ್ತಿದ್ದಾರೆ. 2014ರಲ್ಲಿ ಪಕ್ಷದ ಈಗಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಸ್ಥಾನ ನೀಡಲಾಗಿತ್ತು. 2019ರಲ್ಲಿ ಅಧೀರ್‌ ರಂಜನ್ ಚೌಧರಿ ಅವರಿಗೆ ಈ ಸ್ಥಾನ ನೀಡಲಾಗಿತ್ತು.

ನರೇಂದ್ರ ಮೋದಿ ವಿರುದ್ಧ ಸದನದೊಳಗೆ ಹಾಗೂ ಹೊರಗೆ ಧ್ವನಿ ಎತ್ತಿದವರಲ್ಲಿ ರಾಹುಲ್ ಗಾಂಧಿ ಪ್ರಮುಖರು. ಹೀಗಾಗಿ ಅವರೇ ವಿರೋಧ ಪಕ್ಷದ ನಾಯಕನ ಹುದ್ದೆಗೆ ಅರ್ಹ ಎಂದು ಪಕ್ಷದ ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ವ್ಯಕ್ತಿ ಸ್ಪರ್ಧೆಯಿಂದ ಅಂತರ ಕಾಯ್ದುಕೊಂಡಿದ್ದು, ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ವಿರೋಧ ಪಕ್ಷಗಳ ಒಕ್ಕೂಟದ ಶಿವಸೇನಾ (ಯುಬಿಟಿ) ಪಕ್ಷದ ಸಂಜಯ್ ರಾವುತ್ ಹಾಗೂ ವಿಸಿಕೆಯ ತೋಲ್‌ ತಿರುಮಾವಳವನ್‌ ಅವರು ಬಹಿರಂಗವಾಗಿಯೇ ರಾಹುಲ್ ಅವರ ಹೆಸರನ್ನು ಹೇಳಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಚೌಧರಿ ಅವರು ಪರಾಭವಗೊಂಡಿದ್ದಾರೆ. ಒಂದೊಮ್ಮೆ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ರಾಹುಲ್ ನಿರಾಕರಿಸಿದರೆ, ಗೌರವ್‌ ಗೊಗೋಯಿ ಹಾಗೂ ಮನೀಶ್ ತಿವಾರಿ ಅವರು ನಂತರದ ಆಯ್ಕೆಯಾಗಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರೂ ಈ ಹುದ್ದೆಗೆ ಉತ್ತಮ ಆಯ್ಕೆ. ಆದರೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ವೇಣುಗೋಪಾಲ್ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ದಕ್ಷಿಣ ಭಾರತದವರೇ ಇಬ್ಬರಾಗುತ್ತಾರೆ. ಹೀಗಾಗಿ ರಾಹುಲ್ ಆಯ್ಕೆಯಿಂದ ಉತ್ತರಕ್ಕೂ ನ್ಯಾಯ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ದಕ್ಷಿಣ ಅಥವಾ ಉತ್ತರ... ರಾಹುಲ್ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ. ಈ ವಿಷಯದಲ್ಲಿ ಪಕ್ಷದ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಜೂನ್ 4ರಂದು ರಾಹುಲ್ ಹೇಳಿದ್ದರು. 

2ನೇ ಕ್ಷೇತ್ರವಾಗಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ರಾಹುಲ್ ನಿರಾಕರಿಸಿದ್ದರು ಎಂದೆನ್ನಲಾಗಿದೆ. ಅಮೇಠಿಯಲ್ಲಿ ಪರಾಭವಗೊಂಡ ನಂತರ, ರಾಜಕೀಯ ಮರುಜನ್ಮ ನೀಡಿದ ವಯನಾಡ್‌ ಅನ್ನು ತೊರೆಯಲು ರಾಹುಲ್ ನಿರಾಕರಿಸಿದ್ದರು. ಆದರೆ ಸೋನಿಯಾ ಗಾಂಧಿ ಅವರು ಬಿಟ್ಟುಕೊಟ್ಟ ಗಾಂಧಿ ಕುಟುಂಬದ ನೆಚ್ಚಿನ ಕ್ಷೇತ್ರವಾಗಿರುವ ರಾಯ್‌ಬರೇಲಿಯಿಂದ ಸ್ಪರ್ಧಿಸುವಂತೆ ಒತ್ತಡ ಉಂಟಾಗಿದ್ದರಿಂದ, ರಾಹುಲ್ ಅದನ್ನು ಆಯ್ಕೆ ಮಾಡಿಕೊಂಡಿದ್ದರು. 

ಈ ನಡುವೆ ರಾಹುಲ್ ತೊರೆಯುವ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ರಾಯ್‌ಬರೇಲಿಯನ್ನು ಉಳಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಿರುವುದರ ಹಿಂದೆ, ಹಿಂದಿ ಭಾಷಿಕ ಪ್ರದೇಶದಲ್ಲಿನ ಪಕ್ಷದ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಇದು ಉತ್ತಮ ಆಯ್ಕೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.