ನೋಯ್ಡಾ: ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಧರ್ಮದ ಆಧಾರದ ಮೇಲೆ ಮತ್ತು ಸಮಾಜವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಗೌತಮ್ ಬುದ್ಧನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಶರ್ಮಾ ಅವರನ್ನು ಬೆಂಬಲಿಸಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಅವರು ಮಾತನಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ, ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
‘ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಹೇಳಿಕೆ ಸಂಬಂಧ ಗದ್ದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
‘2006ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಸ್ಲಿಮರಿಗೆ ಮೀಸಲಾತಿ ವಿಸ್ತರಿಸುವ ಬಗ್ಗೆ ಮಾತನಾಡಿದ್ದರು. ಜತೆಗೆ, ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಹೇಳಿಕೆ ನೀಡಿದ್ದರು’ ಎಂದು ರಾಜನಾಥ ಸಿಂಗ್ ಪುನರುಚ್ಚರಿಸಿದ್ದಾರೆ.
‘ನಾನು ಹಿಂದಿನಿಂದಲ್ಲೂ ಪ್ರಧಾನಿ ಮೋದಿಯನ್ನು ಬಲ್ಲವನಾಗಿದ್ದೇನೆ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ಅವರು (ಮೋದಿ) ಎಂದಿಗೂ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂದು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಜತೆಗೆ ಯಾವತ್ತೂ ದೇಶವನ್ನು ವಿಭಜಿಸುವ ಪ್ರಯತ್ನವನ್ನೂ ಮಾಡುವುದಿಲ್ಲ. ನಾವು ಎಲ್ಲರನ್ನೂ ಒಳಗೊಂಡಂತೆ ಭಾರತವನ್ನು ವಿಶ್ವದ ಶ್ರೇಷ್ಠ ದೇಶವನ್ನಾಗಿ ಮಾಡಲು ಬಯಸುತ್ತವೆ’ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.