ಪಟ್ನಾ: ‘ಸುದೀರ್ಘ ಭಾಷಣ ಮಾಡುವುದನ್ನು ಬಿಟ್ಟು, ದೇಶವನ್ನು ವಿಭಜಿಸುವುದನ್ನು ನಿಲ್ಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನಂತದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ನನ್ನನ್ನು ‘ದೇವರು ಕಳುಹಿಸಿದ್ದಾರೆ’ ಎಂದು ಉತ್ತರಿಸಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
‘ದೇಶದಲ್ಲಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದ ರಾಜಪ್ರಭುತ್ವವನ್ನು ತೊಡೆದುಹಾಕುವ ಕೆಲಸ ಮಾಡಿತು. ಆದರೆ, ಪ್ರಧಾನಿ ಮೋದಿ ಇದೀಗ ರಾಜ್ಯಗಳಲ್ಲಿ ಅದಾನಿ ಮತ್ತು ಅಂಬಾನಿ ಎಂಬ ಹೊಸ ದೊರೆಗಳನ್ನು ನೇಮಕ ಮಾಡಿದ್ದಾರೆ. ಜೂನ್ 4ರ ನಂತರ ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ವ್ಯವಸ್ಥೆ ಬಗ್ಗೆ ಮೋದಿಯವರನ್ನು ಇ.ಡಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಆಗ ಅವರು ದುಷ್ಕೃತ್ಯಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ನನ್ನನ್ನು ‘ದೇವರು ಕಳುಹಿಸಿದ್ದಾರೆ’ ಎಂದು ಉತ್ತರಿಸಿದರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಕಾಲೆಳೆದಿದ್ದಾರೆ.
‘ಸುದೀರ್ಘ ಭಾಷಣ ಮಾಡುವುದನ್ನು ಬಿಟ್ಟು, ದೇಶ ವಿಭಜಿಸುವುದನ್ನು ನಿಲ್ಲಿಸಿ. ಜತೆಗೆ, ದೇಶದ ಯುವಕರಿಗೆ ನೀವು ಎಷ್ಟು ಉದ್ಯೋಗಗಳನ್ನು ನೀಡಿದ್ದೀರಿ ಎಂಬುದರ ಬಗ್ಗೆ ಬಿಹಾರದ ಜನರಿಗೆ ವಿವರಿಸಿ’ ಎಂದು ಮೋದಿಗೆ ರಾಹುಲ್ ಸವಾಲು ಹಾಕಿದ್ದಾರೆ.
ಲೋಕಸಭೆ ಚುನಾವಣೆಗೆ ಏಳನೇ ಮತ್ತು ಕೊನೆಯ ಹಂತದ ಮತದಾನ ಜೂನ್ 1ರಂದು ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.