ನವದೆಹಲಿ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಮೂರನೇ ಸಲ ಪ್ರಮಾಣವಚನ ಸ್ವೀಕರಿಸುತ್ತಿರಬಹುದು. ಆದರೆ, ಅವರಿಗೆ ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂಗೆ ಸಿಕ್ಕಿದ್ದಂತಹ ಜನಾದೇಶ ಸಿಕ್ಕಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸುದೀಪ್ ಬಂಡೋಪಾಧ್ಯಾಯ ಭಾನುವಾರ ಹೇಳಿದ್ದಾರೆ.
ನೆಹರೂ ನಂತರ ಸತತವಾಗಿ ಮೂರನೇ ಸಲ ದೇಶದ ಪ್ರಧಾನಿಯಾದ ಹೆಗ್ಗಳಿಗೆ ಮೋದಿ ಅವರಿಗೆ ಸಲ್ಲುತ್ತದೆ.
ಲೋಕಸಭೆಯಲ್ಲಿ ಟಿಎಂಸಿ ನಾಯಕನಾಗಿ ಪುನರಾಯ್ಕೆಗೊಂಡಿರುವ ಬಂಡೋಪಾಧ್ಯಾಯ, ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಧನಾತ್ಮಕವಾಗಿ ಕಾರ್ಯನಿರ್ವಹಿಸಲಿವೆ ಎಂದೂ ಹೇಳಿದ್ದಾರೆ.
'ಜನರು ಅವರ (ಮೋದಿ) ಪರವಾಗಿ ಅಭಿಮತ ವ್ಯಕ್ತಪಡಿಸಿರಬಹುದು. ಆದರೆ, ಅದು ನೆಹರೂ ಅವರು ಹೊಂದಿದ್ದ ಜನಾದೇಶಕ್ಕೆ ಸಮವಲ್ಲ' ಎಂದು ಟಿಎಂಸಿ ನಾಯಕ ಪ್ರತಿಪಾದಿಸಿದ್ದಾರೆ.
ಈ ಸರ್ಕಾರವು ಪ್ರಜಾಸತಾತ್ಮಕ ಪ್ರಕ್ರಿಯೆಯಂತೆ ಇಂದು ಪ್ರಮಾಣವಚನ ಕಾರ್ಯಕ್ರಮದ ಮೂಲಕ ರಚನೆಯಾಗುತ್ತಿದೆ. ಆದರೆ, ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿರುವಂತೆ ಪೂರ್ಣಾವಧಿಗೆ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ನೆಹರೂ vs ಮೋದಿ
ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 1952ರ ಸಾರ್ವತ್ರಿಕ ಚುನಾವಣೆಯಲ್ಲಿ 364 ಸ್ಥಾನಗಳನ್ನು ಗೆದ್ದಿತ್ತು. 1957ರಲ್ಲಿ 371 ಹಾಗೂ 1962ರಲ್ಲಿ 361 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.
2014ರಲ್ಲಿ ಮೋದಿ ನೇತೃತ್ವದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಎದುರಿಸಿದ್ದ ಬಿಜೆಪಿ, 282 ಸ್ಥಾನ ಜಯಿಸಿತ್ತು. ನಂತರದ ಚುನಾವಣೆಯಲ್ಲಿ 303 ಹಾಗೂ ಈ ಬಾರಿ 240 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಚೇತರಿಕೆ
ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಟಿಎಂಸಿ, ಚೇತರಿಸಿಕೊಂಡಿದೆ. ರಾಜ್ಯದಲ್ಲಿರುವ 42 ಕ್ಷೇತ್ರಗಳ ಪೈಕಿ 29ರಲ್ಲಿ ಜಯ ಸಾಧಿಸಿದೆ. ಉಳಿದ 13 ಸ್ಥಾನಗಳ ಪೈಕಿ 12 ಬಿಜೆಪಿ ಮತ್ತು 1 ಕಾಂಗ್ರೆಸ್ ಪಾಲಾಗಿವೆ.
ಇದರೊಂದಿಗೆ, ಕಾಂಗ್ರೆಸ್ (99) ಹಾಗೂ ಸಮಾಜವಾದಿ ಪಕ್ಷಗಳ (37) ನಂತರ ಲೋಕಸಭೆಯಲ್ಲಿ ಮೂರನೇ ಅತಿದೊಡ್ಡ ವಿರೋಧ ಪಕ್ಷವಾಗಿ ಈ ಸಲ ಹೊರಹೊಮ್ಮಿದೆ.
ಪಶ್ಚಿಮ ಬಂಗಾಳದಲ್ಲಿ 2019ರಲ್ಲಿ ಟಿಎಂಸಿ 22 ಹಾಗೂ ಬಿಜೆಪಿ 18 ಕಡೆ ಗೆದ್ದಿತ್ತು. ಉಳಿದೆರೆಡರಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.