ಜಲಂಧರ್: 'ನಾನು ಭಗತ್ ಸಿಂಗ್ ಅನುಯಾಯಿ. ದೇಶದ ರಕ್ಷಣೆಗಾಗಿ 100 ಸಲ ಬೇಕಾದರೂ ಜೈಲಿಗೆ ಹೋಗಲು ಸಿದ್ಧವಿದ್ದೇನೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಮಾರ್ಚ್‌ನಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಪ್ರಜಾತಂತ್ರದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಪಂಜಾಬ್‌ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, 'ನಾನು ಭಗತ್ ಸಿಂಗ್ ಅನುಯಾಯಿ. ದೇಶದ ರಕ್ಷಣೆಗಾಗಿ ಜೂನ್ 2ರಂದು ಮತ್ತೆ ಜೈಲಿಗೆ ಹೋಗಲು ಸಿದ್ಧವಿದ್ದೇನೆ. ಈ ಬಗ್ಗೆ ಹೆಮ್ಮೆಯಿದೆ' ಎಂದು ಹೇಳಿದ್ದಾರೆ.
'ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 'ಇಂಡಿಯಾ' ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿಗೆ 200ಕ್ಕಿಂತಲೂ ಕಡಿಮೆ ಸ್ಥಾನಗಳಷ್ಟೇ ಸಿಗಲಿದೆ' ಎಂದು ಅವರು ಭವಿಷ್ಯ ನುಡಿದಿದ್ದಾರೆ.
'ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅವರು (ಬಿಜೆಪಿ) ಆರೋಪಿಸುತ್ತಿದೆ. ಆದರೆ ಒಂದೇ ಒಂದು ಸಾಕ್ಷ್ಮಗಳಿಲ್ಲ. ₹100 ಕೋಟಿಯ ಹಗರಣ ನಡೆದಿದೆ ಎಂದು ಹೇಳುತ್ತಾರೆ. ಈಗಾಗಲೇ 500ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ನಯಾ ಪೈಸೆ ಸಿಕ್ಕಿಲ್ಲ. ಹಾಗಿದ್ದರೆ ಆ ₹100 ಕೋಟಿ ಹಣ ಗಾಳಿಯಲ್ಲಿ ಮಾಯವಾಯಿತೇ' ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ಕೇಜ್ರಿವಾಲ್ ಮಾಡಿರುವುದಕ್ಕೆ ತನ್ನನ್ನು ಬಂಧಿಸಲಾಗಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ.
'ದೆಹಲಿ ಹಾಗೂ ಪಂಜಾಬ್‌ನಲ್ಲಿ ನಾವು ಉಚಿತ ವಿದ್ಯುತ್ ನೀಡಿದ್ದೇವೆ. ಗುಣಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸಿದ್ದೇವೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ನನ್ನನ್ನು ದಮನಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಯಾವ ಪ್ರಯತ್ನವೂ ಯಶ ಕಾಣುವುದಿಲ್ಲ. ಮೋದಿ ಸರ್ವಾಧಿಕಾರ ಹಾಗೂ ಗೂಂಡಾಗಿರಿ ವಿರುದ್ಧ ಹೋರಾಟ ಮುಂದುವರಿಯಲಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.