ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳ ‘ದುರ್ಬಳಕೆ’ ತಡೆಯಲು ಕಾನೂನು ರೂಪಿಸುವುದು, ‘ಜನ ವಿರೋಧಿ’ ಕಾನೂನುಗಳ ತಿದ್ದುಪಡಿ, ಹಳೆ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಹಲವು ಪ್ರಸ್ತಾವಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಕರಡು ಪ್ರಣಾಳಿಕೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಪ್ರಣಾಳಿಕೆಗೆ ಒಪ್ಪಿಗೆ ನೀಡುವ ಮತ್ತು ಅದರ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸುವ ಅಧಿಕಾರವನ್ನು ಸಿಡಬ್ಲ್ಯುಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದೆ.
ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಪಿ.ಚಿದಂಬರಂ ಅವರು ಕರಡು ಪ್ರಣಾಳಿಕೆಯಲ್ಲಿರುವ ವಿವರಗಳನ್ನು ಸಭೆಯ ಮುಂದಿಟ್ಟರಲ್ಲದೆ, ಇನ್ನಷ್ಟು ಸಲಹೆಗಳನ್ನು ನೀಡುವಂತೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಸೆಳೆಯಲು ಪಕ್ಷವು ಈಗಾಗಲೇ ಘೋಷಿಸಿರುವ ಐದು ‘ನ್ಯಾಯ‘ಗಳು ಪ್ರಣಾಳಿಕೆಯ ‘ಹೈಲೈಟ್’ ಆಗಿರಲಿದೆ. ‘ರೈತ ನ್ಯಾಯ’, ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ ನ್ಯಾಯ’ ಹಾಗೂ ‘ಹಿಸ್ಸೇದಾರಿ (ಭಾಗಿದಾರರ) ನ್ಯಾಯ’ ಎಂಬ ಗ್ಯಾರಂಟಿಗಳನ್ನು ಪಕ್ಷವು ಈಗಾಗಲೇ ಘೋಷಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ತಿದ್ದುಪಡಿ ಮಾಡಬೇಕಾದ ಕಾನೂನುಗಳ ಬಗ್ಗೆ ವಿವರವಾದ ಮಾಹಿತಿಯು ಕರಡು ಪ್ರಣಾಳಿಕೆಯಲ್ಲಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ರಿಮಿನಲ್ ಅಪರಾಧಗಳಲ್ಲಿ ನ್ಯಾಯದಾನ, ಪರಿಸರ ಮತ್ತು ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ತಿದ್ದುಪಡಿ ಆಗುವ ಸಾಧ್ಯತೆಗಳಿವೆ.
‘ಸಿಡಬ್ಲ್ಯುಸಿ ಸಭೆಯಲ್ಲಿ ಐದು ನ್ಯಾಯಗಳು (ಪಾಂಚ್ ನ್ಯಾಯ್) ಮತ್ತು 25 ಗ್ಯಾರಂಟಿಗಳ ಬಗ್ಗೆ ಗಹನವಾದ ಚರ್ಚೆ ನಡೆಯಿತು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.
ಪಕ್ಷದ ‘ಗ್ಯಾರಂಟಿ‘ಗಳನ್ನು ಜನರ ಬಳಿ ಕೊಂಡೊಯ್ಯಲು ಬೇಕಾದ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮೂರೂವರೆ ಗಂಟೆ ನಡೆದ ಸಭೆಯ ಬಳಿಕ ತಿಳಿಸಿದರು.
ಪ್ರಣಾಳಿಕೆಯಲ್ಲಿ ಏನೇನಿರಬಹುದು?
ಕಾಂಗ್ರೆಸ್ ಪಕ್ಷದ ಲೋಕಸಭೆ ಚುನಾವಣೆಯ ಪ್ರಣಾಳಿಕೆಯು ಈ ಕೆಳಗಿನ ಭರವಸೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
* ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗಿರುವ ಶೇ 50ರ ಮೀಸಲಾತಿ ಮಿತಿಯನ್ನು ತೆಗೆಯುವುದು
* ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ನಡೆಸುವುದು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ವಿಶೇಷ ಬಜೆಟ್
* ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 30 ಲಕ್ಷ ಹುದ್ದೆಗಳ ಭರ್ತಿ
* ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಹಾಗೂ ಲಡಾಖ್‌ಗೆ ವಿಶೇಷ ಸ್ಥಾನಮಾನ
ದೇಶ ಬದಲಾವಣೆ ಬಯಸುತ್ತಿದೆ: ಖರ್ಗೆ
ನವದೆಹಲಿ: ದೇಶವು ಬದಲಾವಣೆಯನ್ನು ಬಯಸುತ್ತಿದೆ ಎಂಬ ಮಾತು ಪುನರುಚ್ಚರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರ ಹೇಳುತ್ತಿರುವ ‘ಗ್ಯಾರಂಟಿ’ ಗಳಿಗೆ 2004ರ ‘ಇಂಡಿಯಾ ಶೈನಿಂಗ್’ ಘೋಷಣೆಗೆ ಒದಗಿದ್ದ ಪರಿಸ್ಥಿತಿಯೇ ಎದುರಾಗಲಿದೆ ಎಂದು ಹೇಳಿದರು.
ಸಿಡಬ್ಲ್ಯುಸಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದೇಶದ ಜನರು ಬದಲಾವಣೆಯನ್ನು ಬಹಳ ಹುರುಪಿನಿಂದ ಎದುರು ನೋಡುತ್ತಿದ್ದಾರೆ’ ಎಂದರು.
ಅಟಲ್ ಬಿಹಾರಿ ನೇತೃತ್ವದ ಬಿಜೆಪಿ ಸರ್ಕಾರವು ‘ಇಂಡಿಯಾ ಶೈನಿಂಗ್’ (ಭಾರತ ಪ್ರಕಾಶಿಸುತ್ತಿದೆ) ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು 2004ರ ಲೋಕಸಭಾ ಚುನಾವಣೆಯನ್ನು ಎದುರಿಸಿತ್ತು. ಆದರೆ ಪಕ್ಷವು ಆ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿತ್ತು. ‘ಪ್ರಣಾಳಿಕೆಯಲ್ಲಿ ಏನೇ ಭರವಸೆ ನೀಡಿದರೂ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ನಾವು ನೀಡುತ್ತಿರುವ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಾಲೋಚನೆ ಚರ್ಚೆ ನಡೆಸಲಾಗಿದೆ. ಇದೇ ಕಾರಣದಿಂದ 1926 ರಿಂದಲೂ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು 'ನಂಬಿಕೆ ಮತ್ತು ಬದ್ಧತೆಯ ದಾಖಲೆ' ಎಂದೇ ಪರಿಗಣಿಸಲಾಗಿದೆ’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ‘ಪ್ರಣಾಳಿಕೆ’ಯನ್ನಷ್ಟೇ ಬಿಡುಗಡೆ ಮಾಡುವುದಿಲ್ಲ. ದೇಶದ ಜನರ ಭವಿಷ್ಯವನ್ನು ಉಜ್ವಲಗೊಳಿಸುವ ‘ನ್ಯಾಯಪತ್ರ’ ಬಿಡುಗಡೆ ಮಾಡಲಿದೆ.-ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.