ADVERTISEMENT

ಆಂಧ್ರಪ್ರದೇಶದಲ್ಲಿ ಹಿಂಸಾಚಾರ: ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ EC ಸಮನ್ಸ್‌

ಶಮಿನ್‌ ಜಾಯ್‌
Published 15 ಮೇ 2024, 11:07 IST
Last Updated 15 ಮೇ 2024, 11:07 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಪಿಟಿಐ ಚಿತ್ರ

ನವದೆಹಲಿ: ಆಂಧ್ರಪ್ರದೇಶದಲ್ಲಿ ಚುನಾವಣಾ ಸಂದರ್ಭದಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ನಡೆದಿದೆ ಎನ್ನಲಾದ ಆಡಳಿತ ವೈಫಲ್ಯಕ್ಕೆ ವಿವರಣೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಚುನಾವಣಾ ಆಯೋಗ ಇಂದು (ಬುಧವಾರ) ಸಮನ್ಸ್‌ ಜಾರಿಗೊಳಿಸಿದೆ.

ADVERTISEMENT

ಈಚೆಗೆ ನಡೆದ ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನದ ವೇಳೆ ಆಂಧ್ರಪ್ರದೇಶದ ಹಲವಡೆ ಹಿಂಸಾಚಾರ ನಡೆದಿತ್ತು.

ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿ ಗುರುವಾರ ಖುದ್ದು ಹಾಜರಾಗಿ, ಮತದಾನದ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಡೆದಿದೆ ಎನ್ನಲಾದ ಆಡಳಿತ ವೈಫಲ್ಯದ ಬಗ್ಗೆ ವೈಯಕ್ತಿಕವಾಗಿ ವಿವರಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿರುವ ಚುನಾವಣಾ ಆಯೋಗವು, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.

ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣೆಯನ್ನು ಶಾಂತಿಯುತ ಮತ್ತು ಹಿಂಸಾಚಾರ ಮುಕ್ತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಲೇ ಇದ್ದಾರೆ. ಜತೆಗೆ ಮತಗಟ್ಟೆಗಳ ಮೇಲ್ಚಿಚಾರಣೆಯನ್ನು ಖುದ್ದಾಗಿ ಮಾಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿನ ಚುನಾವಣಾ ಹಿಂಸಾಚಾರಕ್ಕೆ ಕಾರಣ ಯಾರು ಎಂಬ ವಿಚಾರವಾಗಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ಆರೋಪ–ಪ್ರತ್ಯಾರೋಪ ನಡೆದಿದೆ. ಪಲ್ನಾಡು, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿರುವ ಕುರಿತು ವರದಿಯಾಗಿದೆ. ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭೆ ಕ್ಷೇತ್ರಗಳಲ್ಲಿ ಸೋಮವಾರ (ಮೇ 13) ಏಕಕಾಲಕ್ಕೆ ಮತದಾನ ನಡೆದಿತ್ತು.

ಆಂಧ್ರ ಪ್ರದೇಶದಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಡಿಪಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವೈಎಸ್‌ಆರ್‌ಸಿಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಟಿಡಿಪಿ ನಾಯಕರು ವೇಮೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ಮತಗಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.