ADVERTISEMENT

LS Polls Live | 5ನೇ ಹಂತದ ಮತದಾನ ಮುಕ್ತಾಯ– ಬಹುತೇಕ ನೀರಸ ಮತದಾನ

ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಸೇರಿದಂತೆ ಕೆಲವು ಕಡೆ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2024, 14:29 IST
Last Updated 20 ಮೇ 2024, 14:29 IST
<div class="paragraphs"><p>ಮುಂಬೈನಲ್ಲಿ ಮತ ಚಲಾಯಿಸಿದ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅವರ ಕುಟಂಬ</p></div>

ಮುಂಬೈನಲ್ಲಿ ಮತ ಚಲಾಯಿಸಿದ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅವರ ಕುಟಂಬ

   

ಲೋಕಸಭೆ ಚುನಾವಣೆ: ಐದನೇ ಹಂತದ ಮತದಾನ ಆರಂಭ

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ಆರಂಭವಾಗಿದ್ದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿ, ಅಮೇಠಿ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಬಿಜೆಪಿಯ ಸ್ಮೃತಿ ಇರಾನಿ (ಅಮೇಠಿ), ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್ (ಲಖನೌ) ಮತ್ತು ಪೀಯೂಷ್‌ ಗೋಯಲ್ (ಮುಂಬೈ ಉತ್ತರ), ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಹಾಗೂ ಆರ್‌ಜೆಡಿಯ ರೋಹಿಣಿ ಆಚಾರ್ಯ (ಸಾರಣ್) ಅವರು ಕಣದಲ್ಲಿರುವ ಪ್ರಮುಖರು. 

ADVERTISEMENT

ಪಶ್ಚಿಮ ಬಂಗಾಳದ 7 ಕ್ಷೇತ್ರಗಳಲ್ಲಿ ಮತದಾನ

ಪಶ್ಚಿಮ ಬಂಗಾಳದ ಬಂಗಾನ್‌, ಬರಾಕ್‌ಪೊರ್‌, ಹೌರಾ, ಉಲುಬೇರಿಯಾ, ಸೆರಾಂಪೊರ್‌, ಹೂಗ್ಲಿ, ಆರಂಬಾಗ್‌ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಮುಂಬೈನ ಜುಹುವಿನಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಲಖನೌನಲ್ಲಿ ಮತ ಚಲಾಯಿಸಿದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮೋದಿಗಾಗಿ ಮತದಾನ

ಜನರು ವಿಕಸಿತ ಭಾರತ, ವಿಕಸಿತ ಅಯೋಧ್ಯೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ (3ನೇ ಬಾರಿ) ಅಧಿಕಾರ ನೀಡಲು ಮತ ಚಲಾಯಿಸುತ್ತಿದ್ದಾರೆ ಎಂದು ಅಯೋಧ್ಯೆ ಸಂಸದ ಲುಲ್ಲು ಸಿಂಗ್‌ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಅಯೋಧ್ಯೆ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ಅವರು, ಮತ ಚಲಾಯಿಸಿದ ಬಳಿಕ ಈ ರೀತಿ ಹೇಳಿದ್ದಾರೆ.

ಎಲ್ಲೆಲ್ಲಿ ಮತದಾನ?

ವಿವಿಧ ರಾಜ್ಯಗಳ ಒಟ್ಟು 49 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಬಿಹಾರದ 5, ಜಾರ್ಖಂಡ್‌ನ 3, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 7, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ತಲಾ ಒಂದು ಕ್ಷೇತ್ರಗಳು ಸೇರಿವೆ.

ಎಲ್ಲರೂ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಮತದಾನ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಅದನ್ನು ಎಲ್ಲರೂ ಚಲಾಯಿಸಬೇಕು.
–ಶಕ್ತಿಕಾಂತ ದಾಸ್, ಆರ್‌ಬಿಐ ಗವರ್ನರ್

ಮೋದಿ ರೋಡ್‌ ಶೋ

ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ 5ನೇ ಹಂತದ ಮತದಾನ ನಡೆಯುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದ ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಪರ ರೋಡ್‌ ಶೋ ನಡೆಸಿದ್ದಾರೆ.

9 ಗಂಟೆ ಹೊತ್ತಿಗೆ ಶೇ 10.28 ಮತದಾನ

7 ರಾಜ್ಯಗಳಲ್ಲಿ ಬೆಳಿಗ್ಗೆ 9ರ ಹೊತ್ತಿಗೆ ಸರಾಸರಿ ಶೇ 10.28 ಮತ ಚಲಾವಣೆಯಾಗಿದೆ.

ಬಿಹಾರದಲ್ಲಿ ಶೇ 8.86, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 7.63, ಜಾರ್ಖಂಡ್‌ನಲ್ಲಿ ಶೇ 11.68, ಲಡಾಖ್‌ನಲ್ಲಿ ಶೇ 10.51, ಮಹಾರಾಷ್ಟ್ರದಲ್ಲಿ ಶೇ 6.33, ಒಡಿಶಾದಲ್ಲಿ ಶೇ 6.87, ಪಶ್ಚಿಮ ಬಂಗಾಳದಲ್ಲಿ ಶೇ 15.35 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ ನಟ ಅಕ್ಷಯ್ ಕುಮಾರ್

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ; ವಜಾ

ಮತ ಚಲಾಯಿಸಲು ಥಾಣೆ ಮತಗಟ್ಟೆಗೆ ಬಂದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

ಲಡಾಖ್‌ನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಮತದಾನ

ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ. ಇಲ್ಲಿ ಕಾಂಗ್ರೆಸ್‌ನ ತ್ಸೆರಿಂಗ್‌ ನಂಗ್ಯಾಲ್‌ ಮತ್ತು ಬಿಜೆಪಿಯ ತಾಷಿ ಗ್ಯಾಲ್ಸನ್‌ ನಡುವೆ ಪೈಪೋಟಿ ಇದೆ.

ಜನರು ಮತ ಚಲಾಯಿಸುತ್ತಾರೆ ಎಂದು ಭಾವಿಸಿದ್ದೇನೆ. ಅವರ ಧ್ವನಿಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಅದಕ್ಕಾಗಿ ಅವರ ಮತ ಚಲಾಯಿಸಬೇಕು.
– ಒಮರ್ ಅಬ್ದುಲ್ಲಾ, ಜಮ್ಮು & ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್ ಉಪಾಧ್ಯಕ್ಷ

ಉತ್ತರ ಪ್ರದೇಶದಲ್ಲಿ ಬೆಳಿಗ್ಗೆ 9ರ ಹೊತ್ತಿಗೆ ಶೇ 12.89 ಮತದಾನವಾಗಿದೆ.

ಗಣ್ಯರಿಂದ ಮತದಾನ...

ಪ್ರಜಾಪ್ರಭುತ್ವದ ಹಬ್ಬ

ಮತದಾನದ ದಿನ ಪ್ರಜಾಪ್ರಭುತ್ವದ ಹಬ್ಬ. ಮತ ಚಲಾಯಿಸುವ ತಮ್ಮ ಹಕ್ಕನ್ನು ಎಲ್ಲರೂ ಚಲಾಯಿಸಬೇಕು. ನನ್ನ ಕುಟುಂಬದೊಂದಿಗೆ ಬಂದು ಮತದಾನ ಮಾಡಿದ್ದೇನೆ. ಎಲ್ಲರೂ ಮನೆಯಿಂದ ಹೊರಬಂದು ಮತ ಚಲಾಯಿಸಬೇಕು ಎಂದು ಮನವಿ ಮಾಡುತ್ತೇನೆ.
– ದುರ್ಗಾ ಶಂಕರ್‌ ಮಿಶ್ರಾ, ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ

ರಕ್ಷಣಾ ಸಚಿವ ಹಾಗೂ ಉತ್ತರ ಪ್ರದೇಶದ ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜನಾಥ್‌ ಸಿಂಗ್‌ ಅವರು ಮತ ಚಲಾಯಿಸಿದರು.

ಪುರಿ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ: ಮೋದಿ

ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜೆಡಿ ಸರ್ಕಾರದ ಆಡಳಿತದಲ್ಲಿ ಪುರಿಯ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ. ದೇವಾಲಯದ ಗರ್ಭಗುಡಿಯ ಪಕ್ಕದಲ್ಲಿರುವ ರತ್ನ ಭಂಡಾರದ ಕೀಲಿಕೈ ಕಳೆದ ಆರು ವರ್ಷಗಳಿಂದ ಕಾಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಮೋದಿ ಅವರು ಲೋಕಸಭಾ ಚುನಾವಣೆ ನಿಮಿತ್ತ ಒಡಿಶಾದ ಅಂಗುಲ್‌ ಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಭಕ್ತರು ನೀಡಿದ ಅಮೂಲ್ಯ ಚಿನ್ನಾಭರಣಗಳನ್ನು ಇಡಲಾಗಿರುವ ಕೋಣೆಗಳು ರತ್ನ ಭಂಡಾರದಲ್ಲಿವೆ.

ಬಂಗಾಳದಲ್ಲಿ ಮತದಾನದ ಚಿತ್ರಗಳು

ಮಹಾರಾಷ್ಟ್ರದ 13 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 11ರ ವರೆಗೆ ಶೇ 15.93ರಷ್ಟು ಮತದಾನವಾಗಿದೆ.

'ರಾಮನನ್ನು ಕರೆತಂದವರಿಗೆ ಅಧಿಕಾರ'

'ಮತದಾನ ಎಲ್ಲರ ಹಕ್ಕು. ಅದನ್ನು ಯಾರೂ ಕೈ ಚೆಲ್ಲಬಾರದು. ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ, ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿ ಎಂದು ಹಾರೈಸುತ್ತೇನೆ. ಅದೇ ಭಾವದೊಂದಿಗೆ ಮತ ಚಲಾಯಿಸಿದ್ದೇನೆ. 'ರಾಮನನ್ನು ಕರೆದುಕೊಂಡು ಬಂದವರನ್ನು ಅಧಿಕಾರಕ್ಕೆ ತರುತ್ತೇವೆ' ಎಂಬುದು ಜನರ ಭಾವನೆಯಾಗಿದೆ. ಬೇರೆಯವರಿಗೆ ಸಾಧ್ಯವಾಗದನ್ನು ಮೋದಿ ಸಾಧಿಸಿದ್ದಾರೆ' ಎಂದು ಶ್ರೀ ರಾಮ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಬೆಳಿಗ್ಗೆ 11ರ ಹೊತ್ತಿಗೆ ಶೇ 23.66 ಮತದಾನ

2 ಕೇಂದ್ರಾಡಳಿತ ಪ್ರದೇಶಗಳು ಹಾಗೂ 6 ರಾಜ್ಯಗಳಲ್ಲಿ 5ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11ರ ಹೊತ್ತಿಗೆ ಶೇ 23.66 ಮಂದಿ ಮತ ಚಲಾಯಿಸಿದ್ದಾರೆ.

ಬಿಹಾರದಲ್ಲಿ ಶೇ 21.11, ಜಮ್ಮು ಮತ್ತು ಕಾಶ್ಮೀರದಲ್ಲಿ 21.37, ಜಾರ್ಖಂಡ್‌ನಲ್ಲಿ 26.18, ಲಡಾಖ್‌ನಲ್ಲಿ 27.87, ಮಹಾರಾಷ್ಟ್ರದಲ್ಲಿ ಶೇ 15.93, ಒಡಿಶಾದಲ್ಲಿ ಶೇ 21.07, ಉತ್ತರ ಪ್ರದೇಶದಲ್ಲಿ 27.76 ಹಾಗೂ ಪಶ್ಚಿಮ ಬಂಗಾಳದಲ್ಲಿ 32.70 ಮತದಾನವಾಗಿದೆ.

'ಭತ್ತಕ್ಕೆ ಬೆಂಬಲ ಬೆಲೆ ಹೆಚ್ಚಳ –ಇದು ಮೋದಿ ಗ್ಯಾರಂಟಿ'

ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಭತ್ತದ ಬೆಳೆಗೆ ನೀಡುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅನ್ನು ಹೆಚ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಒಡಿಶಾದ ಅಂಗುಲ್‌ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡ ಮೋದಿ, 'ಛತ್ತೀಸಗಢದಂತೆ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ, ಭತ್ತದ ಬೆಳೆಗೆ ನೀಡುವ ಎಂಎಸ್‌ಪಿ ಅನ್ನು ₹ 2,200ರಿಂದ ₹ 3,100ಕ್ಕೆ ಹೆಚ್ಚಿಸಲಾಗುವುದು. ಇದು ಮೋದಿಯ ಗ್ಯಾರಂಟಿ. ಭತ್ತದ ಬೆಳೆಯ ಹಣ ಕೇವಲ ಎರಡೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ' ಎಂದು ಭರವಸೆ ನೀಡಿದ್ದಾರೆ.

ರಾಯ್‌ಬರೇಲಿಯಲ್ಲಿ ಶೇ 28.10ರಷ್ಟು ಮತದಾನ

ಉತ್ತರ ಪ್ರದೇಶದ 14 ಕ್ಷೇತ್ರಗಳಲ್ಲಿ ಬೆಳಿಗ್ಗೆ 6ಕ್ಕೆ 5ನೇ ಹಂತದ ಮತದಾನ ಆರಂಭವಾಗಿದೆ. 11ರ ವೇಳೆಗೆ ಸರಾಸರಿ ಶೇ 27.76ರಷ್ಟು ಮತದಾನವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಕಣಕ್ಕಿಳಿದಿರುವ ರಾಯ್‌ಬರೇಲಿಯಲ್ಲಿ ಶೇ 28.10, ಅಮೇಥಿಯಲ್ಲಿ ಶೇ 29.25, ಬಾರಾಬಂಕಿಯಲ್ಲಿ ಶೇ 30.60, ಫೈಜಾಬಾದ್‌ನಲ್ಲಿ ಶೇ 29.05, ಫತೇಫುರದಲ್ಲಿ ಶೇ 28.54, ಗೊಂಡಾದಲ್ಲಿ ಶೇ 26.68, ಹಮೀರ್‌ಪುರದಲ್ಲಿ ಶೇ 28.24, ಜಲೌನ್‌ನಲ್ಲಿ ಶೇ 26.97, ಕೈಸರ್‌ಗಂಜ್‌ನಲ್ಲಿ ಶೇ 27.92, ಕೌಶಂಬಿಯಲ್ಲಿ ಶೇ 26.12, ಲಖನೌನಲ್ಲಿ ಶೇ 22.11 ಹಾಗೂ ಮೋಹನ್‌ಲಾಲ್‌ಗಂಜ್‌ನಲ್ಲಿ ಶೇ 28.52ರಷ್ಟು ಮತದಾನವಾಗಿದೆ.

ಮತ ಚಲಾಯಿಸಿದ ರಣವೀರ್‌, ಹಶ್ಮಿ

ಬಾಲಿವುಡ್‌ ನಟರಾದ ರಣವೀರ್‌ ಸಿಂಗ್‌, ಇಮ್ರಾನ್‌ ಹಶ್ಮಿ, ನಟಿ ಕೊಂಕಣ ಸೇನ್‌ ಶರ್ಮಾ ಅವರು ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಮಾತನಾಡಿದ ಶರ್ಮಾ, 'ಮತ ಚಲಾಯಿಸಿದ್ದಕ್ಕೆ ಸಂತಸವಾಗಿದೆ. ದೇಶವನ್ನು ಪ್ರೀತಿಸುತ್ತೇನೆ. ದೇಶದ ಪ್ರಜೆಯಾಗಿ ಮತದಾನ ಮಾಡುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು. ನಾವೆಲ್ಲ ಅದನ್ನು ಚಲಾಯಿಸಬೇಕು' ಎಂದಿದ್ದಾರೆ.

ಹನುಮ ಮಂದಿರಕ್ಕೆ ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ಹನುಮ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಾಹುಲ್‌, ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ.

ಚುನಾವಣಾ ಆಯೋಗದ ರಾಯಭಾರಿಯಾಗಿ, ಮತದಾನದ ಜಾಗೃತಿ ಮೂಡಿಸುವ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

'ಸಮಸ್ಯೆಗಳು ಸೃಷ್ಟಿಯಾಗಲು ಎರಡು ಕಾರಣಗಳಿವ. ಒಂದು, ಆಲೋಚಿಸದೆ ಕಾರ್ಯಪ್ರವೃತ್ತರಾಗುವುದು ಹಾಗೂ ಮತ್ತೊಂದು ಕಾರ್ಯಪ್ರವೃತ್ತರಾಗದೆ ಯೋಚಿಸುತ್ತಲೇ ಇರುವುದು. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕೆಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ' ಎಂದೂ ಅವರು ಹೇಳಿದ್ದಾರೆ.

ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ 1 ಗಂಟೆವರೆಗೆ ಶೇ 36.73 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಮುಂಬೈನಲ್ಲಿ ಮತ ಚಲಾಯಿಸಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಅವರ ಮಗ ಅರ್ಜುನ್

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕ‍ಪ್ಪು ಬಾವುಟ ತೋರಿಸಿದ್ದಾರೆ. 

ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ 3 ಗಂಟೆವರೆಗೆ ಶೇ 47.53 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾನ ನೀರಸವಾಗಿದೆ.

ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ 3ಗಂಟೆವರೆಗೆ ಶೇ 44 ರಷ್ಟು ಮತದಾನ

ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ 5 ಗಂಟೆವರೆಗೆ ಶೇ 56.68 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾನ ನೀರಸವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಸುಮಾರು 1000 ಕ್ಕೂ ಹೆಚ್ಚು ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿವೆ.

ದೇಶದಾದ್ಯಂತ ಇಂದು ನಡೆದ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಮುಕ್ತಾಯವಾಗಿದ್ದು, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಸೇರಿದಂತೆ ಕೆಲವು ಕಡೆ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.  5 ಗಂಟೆವರೆಗೆ ಶೇ 56.68 ರಷ್ಟು ಮತದಾನ ನಡೆದಿದ್ದು ನೀರಸ ಮತದಾನ ಎನ್ನಲಾಗಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.