ಲಖನೌ: ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಸಮಾಜವಾದಿ ಪಕ್ಷ –ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು ಬುಲ್ಡೋಜರ್‌ಗಳಿಂದ ಕೆಡವಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಎಸ್‌ಪಿ-ಕಾಂಗ್ರೆಸ್ ನಾಯಕರು ಅಯೋಧ್ಯೆ ರಾಮಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಬದಲಾಯಿಸಲು ಬಯಸುತ್ತಿದ್ದಾರೆ. ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳುವ ಅಂತಹ ನಾಯಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುವ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಮುಗಿದ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಒಡಕು ಮೂಡುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
‘ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿರುವಾಗಲೇ ‘ಇಂಡಿಯಾ’ ಮೈತ್ರಿಕೂಟ ಪತನವಾಗುವ ಲಕ್ಷಣಗಳು ಕಾಣಿಸುತ್ತಿವೆ. ‘ಶಹಜಾದ’ (ರಾಹುಲ್ ಗಾಂಧಿ) ಈಗಾಗಲೇ ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದೇಶಕ್ಕೆ ಹಾರಲಿದ್ದಾರೆ’ ಎಂದು ಮೋದಿ ಲೇವಡಿ ಮಾಡಿದ್ದಾರೆ.
'2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತ ರಾಹುಲ್ ಗಾಂಧಿ ಈಗ ಅಮೇಠಿಯಿಂದ ಓಡಿ ಹೋಗಿದ್ದಾರೆ. ರಾಹುಲ್‌ಗೆ ಅಮೇಠಿಯಿಂದ ಸ್ಪರ್ಧಿಸಲು ಧೈರ್ಯವಿಲ್ಲ ಎಂದು ನಾನು ಭವಿಷ್ಯ ನುಡಿದಿದ್ದೆ. ಅದೀಗ ನಿಜವಾಗಿದೆ' ಎಂದು ಲೇವಡಿ ಮಾಡಿದ್ದಾರೆ.
'ತನ್ನ ಗೌರವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಈಗ ಮಿಷನ್ 50 ಅನ್ನು ಆರಂಭಿಸಿದೆ. ಹೇಗಾದರೂ ಮಾಡಿ 50 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ' ಎಂದು ಮೋದಿ ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.