ತಿರುವನಂತಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ವಾಗ್ದಾಳಿ ನಡೆಸಿದೆ.
ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಮಾತನಾಡಿ, ಚಂದ್ರಶೇಖರ್ ಅವರು ಹೆಲಿಕಾಪ್ಟರ್ ಮೂಲಕ ಕರ್ನಾಟಕಕ್ಕೆ ತೆರಳಿ ಮತ ಚಲಾಯಿಸಿ ಮರಳಿ ತಿರುವನಂತಪುರಕ್ಕೆ ವಾಪಸ್ ಆಗುವ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದರು. ಆದರೆ, ಮತದಾನದಿಂದ ದೂರ ಉಳಿದಿರುವ ಅವರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ’ ಎಂದು ಟೀಕಿಸಿದ್ದಾರೆ.
‘ಮತ ಚಲಾಯಿಸುವುದು ವ್ಯಕ್ತಿಯ ಮೂಲಭೂತ ಹಕ್ಕು ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪ್ರಜಾಸತ್ತಾತ್ಮಕ ತತ್ವಗಳ ಬಗ್ಗೆ ಚಂದ್ರಶೇಖರ್ ಅವರು ಹೊಂದಿರುವ ಬದ್ಧತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದು ಶಿವನಕುಟ್ಟಿ ಹೇಳಿದ್ದಾರೆ.
ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ಮಾತನಾಡಿ, ‘ಚಂದ್ರಶೇಖರ್ ಅವರು ಮತದಾನದಿಂದ ದೂರವಿರುವುದು ಗಂಭೀರ ವಿಷಯವಾಗಿದ್ದು, ತಿರುವನಂತಪುರ ಕ್ಷೇತ್ರದ ಜನರಿಗೆ ಮೋಸ ಮಾಡಿದಂತಾಗಿದೆ. ಚಂದ್ರಶೇಖರ್‌ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಗುಡುಗಿದ್ದಾರೆ.
‘ನಾನು ತಿರುವನಂತಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದರಿಂದ ನನಗೆ ಈ ಕ್ಷೇತ್ರವೇ ಪ್ರಮುಖ ಆದ್ಯತೆಯಾಗಿದೆ. ಚುನಾವಣಾ ದಿನದಂದು ಕ್ಷೇತ್ರದಲ್ಲಿರುವುದು ನನ್ನ ಕರ್ತವ್ಯ. ಹಾಗಾಗಿ ನಾನು ಮತ ಚಲಾಯಿಸಲು ಕರ್ನಾಟಕಕ್ಕೆ ಹೋಗಲಿಲ್ಲ’ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದರು.
‘ತಿರುವನಂತಪುರದ ಮತದಾರರ ಪಟ್ಟಿಗೆ ನನ್ನ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ವೇಳೆ ತಿರುವನಂತಪುರದಿಂದಲೇ ಮತ ಚಲಾಯಿಸುತ್ತೇನೆ’ ಎಂದು ತಿಳಿಸಿದ್ದರು.
ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಅರ್ಹ ಮತದಾರರಲ್ಲಿ ಸರಾಸರಿ ಶೇ 70.22ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 77.84 ರಷ್ಟು ಮತದಾನವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.