ADVERTISEMENT

LS polls | ಚುನಾವಣಾ ಅಕ್ರಮ ಆರೋಪ: ಇಂಫಾಲ್‌ನ 5 ಬೂತ್‌ಗಳಲ್ಲಿ ಮತದಾನ ಸ್ಥಗಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2024, 10:55 IST
Last Updated 19 ಏಪ್ರಿಲ್ 2024, 10:55 IST
<div class="paragraphs"><p>ಮತದಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ</p></div>

ಮತದಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ

   

ಇಂಫಾಲ್: ಚುನಾವಣಾ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಮಣಿಪುರದ ಪೂರ್ವ ಇಂಫಾಲ್‌ನ 2 ಮತ್ತು ಪಶ್ಚಿಮ ಇಂಫಾಲ್‌ನ 3 ಮತಗಟ್ಟೆಗಳ ಒಟ್ಟು 5 ಬೂತ್‌ಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾನದ ವೇಳೆ ಕೆಲವು ಮಹಿಳೆಯರು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಮತದಾನ ಸ್ಥಗಿತಗೊಳಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಫಾಲ್‌ ಪೂರ್ವ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ADVERTISEMENT

ಈ ಬಾರಿಯ ಲೋಕಸಭಾ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಇಂದು (ಶುಕ್ರವಾರ) 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

'ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಇಂದಿನಿಂದ ಆರಂಭವಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ದಾಖಲೆ ಸೃಷ್ಟಿಸುವಂತೆ ನಾನು ವಿನಂತಿಸುತ್ತೇನೆ' ಎಂದು ಪ್ರಧಾನಿ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇಂದು ಮೊದಲ ಹಂತದ ಮತದಾನ. ನೆನಪಿಡಿ, ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾತಂತ್ರದ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ. ಕಳೆದ 10 ವರ್ಷಗಳಲ್ಲಿ ದೇಶದ ಆತ್ಮಕ್ಕೆ ಆಗಿರುವ ಗಾಯಗಳಿಗೆ ನಿಮ್ಮ ಮತದ ಮುಲಾಮು ಹಚ್ಚಿ ಪ್ರಜಾಪ್ರಭುತ್ವವನ್ನು ಬಲಪಡಿಸಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಕರೆ ನೀಡಿದ್ದಾರೆ.

ದೇಶದ ‍ಪ್ರತಿಯೊಂದು ಮೂಲೆಯಲ್ಲಿ ದ್ವೇಷವನ್ನು ಸೋಲಿಸಿ ಪ್ರೀತಿಯ ಅಂಗಡಿ ತೆರೆಯಿರಿ ಎಂದು ಅವರು ಹೇಳಿದ್ದಾರೆ. ಅಪ್ರೆಂಟಿಸ್‌ ಹಕ್ಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ, ರಾಷ್ಟ್ರವ್ಯಾಪಿ ಜಾತಿಗಣತಿ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿಗಳ ಗ್ರಾಫಿಕ್ಸ್ ಚಿತ್ರವನ್ನೂ ರಾಹುಲ್ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.