ನವದೆಹಲಿ: ಆಮ್ ಆದ್ಮಿ ಪಕ್ಷವು (ಎಎಪಿ) ಲೋಕಸಭಾ ಚುನಾವಣಾ ಪ್ರಚಾರದ ಹಾಡಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ ಬಳಿಕ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಶಾಸಕ ದಿಲೀಪ್ ಪಾಂಡೆ, ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಹಾಡಿಗೆ ಅನುಮೋದನೆ ನೀಡಿದೆ ಎಂದು ಖಚಿತಪಡಿಸಿದ್ದಾರೆ. ದಿಲೀಪ್ ಅವರೇ, ಈ ಹಾಡಿಗೆ ಸಾಹಿತ್ಯ ಬರೆದು, ಕಂಠದಾನ ಮಾಡಿದ್ದಾರೆ.
ಇಡಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಕೋರಿ ‘ಜೈಲ್ ಕಾ ಜವಾಬ್ ವೋಟ್ ಸೆ’ (ಜೈಲಿಗೆ ಹಾಕಿದ್ದಕ್ಕೆ ಮತದ ಮೂಲಕ ಉತ್ತರಿಸಿ) ಅಭಿಯಾನವನ್ನು ಏಪ್ರಿಲ್ 8ರಂದು ಪಕ್ಷವು ಆರಂಭಿಸಿತ್ತು. ಬಳಿಕ ಚುನಾವಣಾ ಆಯೋಗವು ಈ ಹಾಡಿನ ಬಳಕೆಗೆ ನಿರ್ಬಂಧ ಹೇರಿದೆ ಎಂದು ಎಎಪಿ ಪಕ್ಷವು ಹೇಳಿಕೊಂಡಿತ್ತು.
ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ಜಾಹೀರಾತು ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಹಾಡಿನ ಬಳಕೆಗೆ ದೆಹಲಿ ಚುನಾವಣಾ ಆಯೋಗದ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದರು. ಜತೆಗೆ ಹಾಡಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಎಎಪಿ ನಾಯಕರಿಗೆ ಸೂಚಿಸಲಾಗಿತ್ತು.
‘ಸತ್ಯಕ್ಕೆ ತೊಂದರೆಯಾಗಬಹುದು. ಆದರೆ, ಸೋಲಿಸಲಾಗುವುದಿಲ್ಲ. ‘ಜೈಲ್ ಕಾ ಜವಾಬ್ ವೋಟ್ ಸೆ’ ಹಾಡು ಕೇವಲ ಎಎಪಿಯ ಪ್ರಚಾರ ಗೀತೆಯಲ್ಲ. ಆದರೆ, ಇದು ಜನರ ಮನಸ್ಸಿನಲ್ಲಿ ನಡೆಯುತ್ತಿರುವ ಭಾವನೆಗಳ ಸಾರಾಂಶವಾಗಿದೆ. ಅದಕ್ಕಾಗಿಯೇ ದೇಶದ ಜನರು ಸತ್ಯವನ್ನು ಗೆದ್ದಿದ್ದಾರೆ. ಜತೆಗೆ, ಚುನಾವಣಾ ಆಯೋಗವು ಸತ್ಯಮೇವ ಜಯತೇ ಅನ್ನು ಅನುಮೋದಿಸಿದೆ’ ಎಂದು ದಿಲೀಪ್ ಪಾಂಡೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.