ADVERTISEMENT

LS Polls: ಹಂತ ಐದು: ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 19 ಮೇ 2024, 23:44 IST
Last Updated 19 ಮೇ 2024, 23:44 IST
.
.   

ನವದೆಹಲಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿ, ಅಮೇಠಿ ಕ್ಷೇತ್ರಗಳಲ್ಲೂ ಮತದಾನಕ್ಕೆ ಅಖಾಡ ಸಿದ್ಧವಾಗಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಬಿಜೆಪಿಯ ಸ್ಮೃತಿ ಇರಾನಿ (ಅಮೇಠಿ), ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್ (ಲಖನೌ) ಮತ್ತು ಪೀಯೂಷ್‌ ಗೋಯಲ್ (ಮುಂಬೈ ಉತ್ತರ), ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಹಾಗೂ ಆರ್‌ಜೆಡಿಯ ರೋಹಿಣಿ ಆಚಾರ್ಯ (ಸಾರಣ್) ಅವರು ಕಣದಲ್ಲಿರುವ ಪ್ರಮುಖರು. 

ಐದನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಜತೆಯಲ್ಲೇ ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಬಿಜೆಡಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕಣದಲ್ಲಿದ್ದಾರೆ.

ADVERTISEMENT

ನಾಲ್ಕನೇ ಹಂತದ ಮತದಾನದ ಬಳಿಕವೂ ಪ್ರಚಾರದ ಕಣದಲ್ಲಿ ಬಿಜೆಪಿ ಮತ್ತು ‘ಇಂಡಿಯಾ’ ಒಕ್ಕೂಟದ ಮಧ್ಯೆ ಪರಸ್ಪರ ಆರೋಪ, ವಾಗ್ದಾಳಿ ನಡೆದಿದ್ದವು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರದ ಮೇಲೆ ಬುಲ್ಡೋಜರ್‌ ಹರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದರ ವಿರುದ್ಧ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. 

2019ರ ಲೋಕಸಭಾ ಚುನಾವಣೆಯಲ್ಲಿ ಈ 49 ಕ್ಷೇತ್ರಗಳ ಪೈಕಿ 32ರಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ರಾಯ್‌ಬರೇಲಿಯಲ್ಲಿ ಮಾತ್ರ ಜಯ ಸಾಧಿಸಿತ್ತು. ‘ಇಂಡಿಯಾ’ ಕೂಟವು ಕೇವಲ 9 ಕ್ಷೇತ್ರಗಳಲ್ಲಿ ಜಯಿಸಿತ್ತು.

ಮೊದಲ ನಾಲ್ಕು ಹಂತಗಳಲ್ಲಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಆರು ಮತ್ತು ಏಳನೇ ಹಂತದ ಮತದಾನ ಕ್ರಮವಾಗಿ ಮೇ 25 ಹಾಗೂ ಜೂನ್‌ 1 ರಂದು ನಡೆಯಲಿದೆ.

ಆಯೋಗದ ಮನವಿ: ಕಡಿಮೆ ಮತದಾನ ಪ್ರಮಾಣದ ಕುರಿತು ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರನ್ನು ಕೋರಿದೆ. ಮುಂಬೈ, ಠಾಣೆ ಮತ್ತು ಲಖನೌ ಮುಂತಾದ ನಗರಗಳ ಮತದಾರರಿಗೆ ವಿಶೇಷ ಮನವಿಯನ್ನೂ ಮಾಡಿದೆ. ಕಳೆದ ಬಾರಿ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.