ADVERTISEMENT

ಲೋಕಸಭೆ ಚುನಾವಣೆ 4ನೇ ಹಂತ; 96 ಕ್ಷೇತ್ರಗಳಲ್ಲಿ ಇಂದು ಮತದಾನ

ಪಿಟಿಐ
​ಪ್ರಜಾವಾಣಿ ವಾರ್ತೆ
Published 13 ಮೇ 2024, 0:11 IST
Last Updated 13 ಮೇ 2024, 0:11 IST
<div class="paragraphs"><p> ಮತದಾನ ( ಸಾಂಕೇತಿಕ ಚಿತ್ರ)</p></div>

ಮತದಾನ ( ಸಾಂಕೇತಿಕ ಚಿತ್ರ)

   

ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಮತ್ತು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.

ADVERTISEMENT

ಆಂಧ್ರಪ್ರದೇಶ (25) ಮತ್ತು ತೆಲಂಗಾಣದ (17) ಎಲ್ಲ ಕ್ಷೇತ್ರಗಳಲ್ಲದೆ ಉತ್ತರ ಪ್ರದೇಶದ 13, ಮಹಾರಾಷ್ಟ್ರದ 11, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ ಎಂಟು, ಬಿಹಾರದ ಐದು, ಜಮ್ಮು ಮತ್ತು ಕಾಶ್ಮೀರದ ಒಂದು, ಒಡಿಶಾ ಮತ್ತು ಜಾರ್ಖಂಡ್‌ನ ತಲಾ ನಾಲ್ಕು ಕ್ಷೇತ್ರಗಳಲ್ಲಿ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. 

ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ 96 ಕ್ಷೇತ್ರಗಳಲ್ಲಿ ಬಿಜೆಪಿಯು ಕಳೆದ ಬಾರಿ 40ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಿಸಿದ್ದರೆ, ಕಾಂಗ್ರೆಸ್‌ ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳು ಕಣದಲ್ಲಿದ್ದು, 17.48 ಲಕ್ಷ ಅರ್ಹ ಮತದಾರರಿದ್ದಾರೆ. 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಬಮ್ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿ ಶಂಕರ್‌ ಲಾಲ್ವಾನಿ ಭಾರಿ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ‘ನೋಟಾ’ಕ್ಕೆ ಮತಹಾಕುವಂತೆ ಕಾಂಗ್ರೆಸ್‌ ಇಲ್ಲಿನ ಮತದಾರರನ್ನು ಕೇಳಿಕೊಂಡಿದೆ.

ನಾಲ್ಕನೇ ಹಂತ ಮುಕ್ತಾಯಗೊಂಡರೆ, 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಗೆ ತೆರೆ ಬಿದ್ದಂತಾಗಲಿದೆ. 543 ಲೋಕಸಭಾ ಕ್ಷೇತ್ರಗಳಲ್ಲಿ 381ರಲ್ಲಿ ಮತದಾನ ಪೂರ್ಣಗೊಳ್ಳಲಿದೆ.

ಮುಂದಿನ ಮೂರು ಹಂತಗಳ ಮತದಾನ ಮೇ 20, ಮೇ 25 ಮತ್ತು ಜೂನ್‌ 1 ರಂದು ನಡೆಯಲಿದೆ. ಮತ ಎಣಿಕೆಗೆ ಜೂನ್‌ 4ರ ಮುಹೂರ್ತ ನಿಗದಿಯಾಗಿದೆ. 

ಆಂಧ್ರ, ಒಡಿಶಾ: ವಿಧಾನಸಭೆಗೂ ಮತದಾನ

ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜತೆಯಲ್ಲೇ ವಿಧಾನಸಭೆಯ 175 ಸ್ಥಾನಗಳಿಗೂ ಸೋಮವಾರ ಮತದಾನ ನಡೆಯಲಿದೆ. 147 ಸದಸ್ಯ ಬಲದ ಒಡಿಶಾ ವಿಧಾನಸಭೆಯ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ವೇದಿಕೆ ಸಜ್ಜುಗೊಂಡಿದೆ. 

ಆಂಧ್ರಪ್ರದೇಶದಲ್ಲಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ‘ಇಂಡಿಯಾ’ ಒಕ್ಕೂಟ ಮತ್ತು ಎನ್‌ಡಿಎ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಮತ್ತು ಪವನ್‌ ಕಲ್ಯಾಣ್ ಅವರ ಜನಸೇನಾ ಪಾರ್ಟಿ (ಜೆಎಸ್‌ಪಿ) ಎನ್‌ಡಿಎ ಜತೆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.