ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಗುಜರಾತ್‌ನಲ್ಲಿ ಎಎಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿರುವ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷವು ಇಂದು ಬಿಡುಗಡೆ ಮಾಡಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಅವರ ಪತ್ನಿ ಸುನೀತಾ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ರಾಘವ್ ಚಡ್ಡಾ ಸೇರಿದಂತೆ ಇತರೆ ನಾಯಕರ ಹೆಸರು ಪಟ್ಟಿಯಲ್ಲಿದೆ.
ಎಎಪಿ ಸಂಸದ ಸಂಜಯ್ ಸಿಂಗ್, ದೆಹಲಿ ಸಚಿವೆ ಅತಿಶಿ, ಸಚಿವರಾದ ಎಸ್. ಗೋಪಾಲ್ ರಾಯ್, ಸೌರಭ್ ಭಾರದ್ವಾಜ್ ಮತ್ತು ಕೈಲಾಶ್ ಗೆಹಲೋತ್ ಸಹ ಸ್ಟಾರ್ ಪ್ರಚಾರಕರಾಗಿದ್ದಾರೆ.
ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳ ಪೈಕಿ ಎಎಪಿ ಭರೂಚ್ ಮತ್ತು ಭಾವನಗರದಲ್ಲಿ ಸ್ಪರ್ಧಿಸುತ್ತಿದೆ. ಉಳಿದಂತೆ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ.
ಭರೂಚ್‌ನಿಂದ ಚೈತಾರ್ ವಾಸವಾ ಮತ್ತು ಭಾವನಗರದಿಂದ ಉಮೇಶ್ ಮಕ್ವಾನಾ ಅವರನ್ನು ಎಎಪಿ ಕಣಕ್ಕಿಳಿಸಿದೆ. ಗುಜರಾತ್‌ನಲ್ಲಿ ಮೇ 7ರಂದು ಒಂದೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಬಂಧನಕ್ಕೊಳಗಾಗಿದ್ದು, ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.