ಮಥುರಾ: ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಇಂದು ( ಗುರುವಾರ) ನಾಮಪತ್ರ ಸಲ್ಲಿಸಿದ್ದಾರೆ.
ಮಥುರಾ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿ ಕಣಕ್ಕೆ ಇಳಿದಿರುವ ಅವರು, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಥುರಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಈ ಬಾರಿಯೂ ಸ್ಪರ್ಧಿಸುತ್ತಿದ್ದೇನೆ. ಬಾಕಿ ಉಳಿದಿರುವ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇನೆ. ಎಲ್ಲರ ಸಹಕಾರದಿಂದಾಗಿ ಹೆಚ್ಚಿನ ಅಭಿವೃದ್ಧಿಯಾಗಲಿದೆ ಎಂದರು.
ಮಥುರಾದಲ್ಲಿ ಯಮುನಾ ನದಿ ಸ್ವಚ್ಛತಾ ಕಾರ್ಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೇಮಾ ಮಾಲಿನಿ, 50 ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ಕೇವಲ 10 ವರ್ಷದಲ್ಲಿ ಮಾಡುವುದು ಅಸಾಧ್ಯ. ಆದರೆ ಯಮುನಾ ನದಿ ಸ್ವಚ್ಛತಾ ಕಾರ್ಯ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಮಾಲಿನಿ, ಜೀವನದಲ್ಲಿ ಏನನ್ನಾದರೂ ಸಾಧಿಸಿದವರನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಹೇಮಾ ಮಾಲಿನಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವ ಸ್ವತಂತ್ರ ದೇವ್ ಸಿಂಗ್ ಕೂಡ ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆಯ ಎರಡನೇ ಹಂತವಾದ ಏಪ್ರಿಲ್ 26 ರಂದು ಮಥುರಾದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಇಂದು (ಏಪ್ರಿಲ್ 4) ಕೊನೆಯ ದಿನವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಏಪ್ರಿಲ್ 8 ರವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.