ನವದೆಹಲಿ: 'ಸರ್ವಾಧಿಕಾರದಿಂದ ದೇಶವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮತ್ತೆ ಜೈಲಿಗೆ ಹೋಗುತ್ತಿದ್ದೇನೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.
'ನಾನು ಜೂನ್ 2ರಂದು ಶರಣಾಗುತ್ತೇನೆ. ಜೈಲಿನಲ್ಲಿ ಮತ್ತೆ ಕಿರುಕುಳ ನೀಡಿದರೂ ತಲೆಬಾಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಮಾರ್ಚ್ ತಿಂಗಳಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಪ್ರಜಾತಂತ್ರದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ದೆಹಲಿ, ಪಂಜಾಬ್, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಪ್ರಚಾರ ನಡೆಸಿದ್ದರು.
'ನಾನು ಜೂನ್ 2ರಂದು ಶರಣಾಗಬೇಕು. ಇನ್ನೆಷ್ಟು ದಿನ ಜೈಲಿನಲ್ಲಿ ಇರಬೇಕೋ ಎಂಬುದು ತಿಳಿದಿಲ್ಲ. ಈ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ಅವರು ಹೇಳಿದ್ದಾರೆ.
'ಜೈಲಿನಲ್ಲಿ ನನಗೆ ಕಿರುಕುಳ ನೀಡಲಾಯಿತು. ಔಷಧಿಯನ್ನು ನೀಡಲಿಲ್ಲ. ನನ್ನನ್ನು ಬಂಧಿಸಿದಾಗ 70 ಕೆ.ಜಿ ತೂಕ ಇದ್ದೆ. ಬಂಧನದ ಬಳಿಕ ನನ್ನ ತೂಕ 6 ಕೆ.ಜಿಯಷ್ಟು ಕಡಿಮೆಯಾಯಿತು' ಎಂದು ಅವರು ವಿವರಿಸಿದರು.
ಭಾನುವಾರ ಸಂಜೆ 3ಗಂಟೆ ಹೊತ್ತಿಗೆ ತಿಹಾರ್ ಜೈಲಿಗೆ ಹೋಗಿ ಶರಣಾಗುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.