ADVERTISEMENT

ಕೇಜ್ರಿವಾಲ್‌ಗೆ ಜಾಮೀನು | ಆದ್ಯತೆ ಮೇಲೆ ಪರಿಗಣಿಸಲಾಗುವುದು: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 8 ಮೇ 2024, 0:11 IST
Last Updated 8 ಮೇ 2024, 0:11 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ‘ಅರವಿಂದ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ. ಇನ್ನೊಂದೆಡೆ ಲೋಕಸಭಾ ಚುನಾವಣೆಗಳೂ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ, ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬಹುದೇ ಎಂಬುದನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಕೇಜ್ರಿವಾಲ್ ಅವರು ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ADVERTISEMENT

ಮಧ್ಯಂತರ ಜಾಮೀನು ನೀಡುವುದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇರುವ ವಿಭಾಗೀಯ ಪೀಠವು, ಮಧ್ಯಾಹ್ನ 2 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಪೀಠವು ತೀರ್ಪು ಪ್ರಕಟಿಸಲಿಲ್ಲ.

ಹೀಗಾಗಿ, ಕೇಜ್ರಿವಾಲ್‌ ಅವರಿಗೆ ದೆಹಲಿ ಅಬಕಾರಿ ಹಗರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಪರಿಹಾರ ಸಿಗಲಿಲ್ಲ. ಗುರುವಾರ ಇಲ್ಲವೇ ಮುಂದಿನ ವಾರ ಅರ್ಜಿ ವಿಚಾರಣೆ ಮುಂದುವರಿಸುವುದಾಗಿಯೂ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇರುವ ಪೀಠವು, ಅರ್ಜಿ ವಿಚಾರಣೆ ನಡೆಸಿತು.

‘ಇದೊಂದು ಅಸಾಧಾರಣ ಸನ್ನಿವೇಶ. ಕೇಜ್ರಿವಾಲ್‌ ಅವರು ಅಪರಾಧ ಎಸಗುವ ಚಾಳಿ ಇರುವವರೂ ಅಲ್ಲ’ ಎಂದು ಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ,‘ನಾವು ಎಂತಹ ನಿದರ್ಶನ ನೀಡಲು ಹೊರಟಿದ್ದೇವೆ? ಇತರರು ಮುಖ್ಯಮಂತ್ರಿಗಿಂತ ಕಡಿಮೆ ಮಹತ್ವವುಳ್ಳವರೇ’ ಎಂದು ಪ್ರಶ್ನಿಸಿದರು.

‘ಅವರು (ಕೇಜ್ರಿವಾಲ್‌) ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಬೇರೆ ಯಾವ ಪ್ರಕರಣದಲ್ಲಿಯೂ ಅವರ ಪಾತ್ರ ಇಲ್ಲ’ ಎಂದು ಪೀಠ ಹೇಳಿತು.

‘ರಾಜಕಾರಣಿಗಳನ್ನು ವಿಶೇಷವಾಗಿ ಪರಿಗಣಿಸುವ ಅಗತ್ಯ ಇಲ್ಲ. ಆದರೆ, ಸಾರ್ವತ್ರಿಕ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುತ್ತವೆ. ಈಗಾಗಲೇ ಮತದಾನವೂ ಆರಂಭವಾಗಿದೆ. ಈ ದೃಷ್ಟಿಕೋನದಿಂದ ನಾವು ಚಿಂತನೆ ನಡೆಸುತ್ತಿದ್ದೇವೆ’ ಎಂದು ಪೀಠ ಹೇಳಿತು.

ಇದೇ ವೇಳೆ, ‘ನಿಮ್ಮ ಕಕ್ಷಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೂ ಕೂಡ, ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಧಿಕೃತ ಕರ್ತವ್ಯಗಳನ್ನು ನಿಭಾಯಿಸುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ’ ಎಂದು  ಕೇಜ್ರಿವಾಲ್‌ ಪರ ಹಾಜರಿದ್ದ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಹೇಳಿದರು.

‘ಮುಖ್ಯಮಂತ್ರಿಯಾಗಿ ಮುಂದುವರಿಯುವುದು ನಿಮ್ಮ ಆಯ್ಕೆ. ಸರ್ಕಾರ ಮುನ್ನಡೆಸುವ ಭಾಗವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಂಡಿದ್ದೇ ಆದಲ್ಲಿ ಅದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಮಾತ್ರ ಅವರನ್ನು (ಕೇಜ್ರಿವಾಲ್‌) ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ’ ಎಂದೂ ಹೇಳಿದರು.

ತನಿಖೆಯನ್ನು ಪೂರ್ಣಗೊಳಿಸುವಲ್ಲಿ ಆಗುತ್ತಿರುವ ವಿಳಂಬಕ್ಕೆ ಕಳವಳ ವ್ಯಕ್ತಪಡಿಸಿದ ಪೀಠ, ಜಾರಿ ನಿರ್ದೇಶನಾಲಯ ತನ್ನ ಬಳಿ ಇರುವ ಎಲ್ಲ ಕಡತಗಳನ್ನು ಹಾಜರುಪಡಿಸುವಂತೆ ಸೂಚಿಸಿತು.

‘ಈಗಾಗಲೇ ಎರಡು ವರ್ಷಗಳು ಕಳೆದಿವೆ. ಇದು ಯಾವುದೇ ಸಂಸ್ಥೆಗೆ ಶೋಭೆ ತರುವ ವಿಚಾರವಲ್ಲ. ಈ ಪ್ರಕರಣದಲ್ಲಿ ವಿಚಾರಣೆ ಯಾವಾಗ ಆರಂಭವಾಗುತ್ತದೆ’ ಎಂದು ಜಾರಿ ನಿರ್ದೇಶನಾಲಯ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರನ್ನು ಪೀಠ ಪ್ರಶ್ನಿಸಿತು.

ಇ.ಡಿ ವಾದ: ವಿಚಾರಣೆ ವೇಳೆ, ‘ಈ ಪ್ರಕರಣವು ರಾಜಕೀಯ ಪ್ರೇರಿತವಲ್ಲ. ರಾಜಕೀಯ ನಮಗೆ ಸಂಬಂಧವಿಲ್ಲ. ನಮಗೆ ಸಾಕ್ಷ್ಯಗಳೇ ಮುಖ್ಯವಾಗಿದ್ದು, ಅವುಗಳನ್ನು ನಾವು ಹೊಂದಿದ್ದೇವೆ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್ ರಾಜು ಅವರು ಪೀಠಕ್ಕೆ ತಿಳಿಸಿದರು.

‘ಕೇಜ್ರಿವಾಲ್‌ ಅವರು 2022ರಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 7 ಸ್ಟಾರ್‌ ಹೋಟೆಲ್‌ನಲ್ಲಿ ತಂಗಿದ್ದರು. ಈ ಹೋಟೆಲ್‌ನ ಬಿಲ್‌ ಅನ್ನು ಚನ್‌ಪ್ರೀತ್‌ ಸಿಂಗ್‌ ಪಾವತಿಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ನಗದು ರೂಪದಲ್ಲಿ ನೀಡಿದ್ದ ಹಣವನ್ನು ಸಿಂಗ್‌ ಅವರು ಸ್ವೀಕರಿಸಿದ್ದರು ಎಂಬ ಆರೋಪ ಇದೆ’ ಎಂದು ತಿಳಿಸಿದರು.

‘ತನಿಖೆಯ ಆರಂಭಿಕ ಹಂತದಲ್ಲಿ ಕೇಜ್ರಿವಾಲ್‌ ಅವರ ಇಡೀ ಹಗರಣದ ಕೇಂದ್ರಬಿಂದುವಾಗಿರಲಿಲ್ಲ. ಈ ಬಗ್ಗೆ ಇ.ಡಿ ಸಹ ಗಮನ ಹರಿಸಿರಲಿಲ್ಲ. ಯಾವಾಗ ತನಿಖೆಯಲ್ಲಿ ಪ್ರಗತಿ ಕಂಡುಬಂತೋ ಆಗ ಕೇಜ್ರಿವಾಲ್‌ ಅವರ ಪಾತ್ರವೂ ಸ್ಪಷ್ಟವಾಗುತ್ತಾ ಹೋಯಿತು’ ಎಂದು ಅವರು ಪೀಠಕ್ಕೆ ವಿವರಿಸಿದರು.

‘ಕೇಜ್ರಿವಾಲ್‌ ಅವರು 9 ಬಾರಿ ಇ.ಡಿ ಸಮನ್ಸ್‌ಗಳಿಂದ ನುಣುಚಿಕೊಂಡಿದ್ದಾರೆ. ಈ ಕಾರಣಕ್ಕೆ ತನಿಖಾ ಪ್ರಕ್ರಿಯೆಯಲ್ಲಿ ಅಮೂಲ್ಯ ಆರು ತಿಂಗಳು ಅವಧಿ ನಷ್ಟವಾಗಿದೆ’ ಎಂದು ಮೆಹ್ತಾ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.