ಬಾಲೇಶ್ವರ: 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪುನರುಚ್ಚರಿಸಿದ್ದಾರೆ.
ಒಡಿಶಾದ ಭದ್ರಕ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, ಎಂಎಸ್‌ಪಿಗೆ ಕಾನೂನು ಖಾತ್ರಿ ಮತ್ತು ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಯೋಧರನ್ನು 'ಮಜ್ದೂರ್' ಮಾಡಿದ ಮೋದಿ...
ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್, 'ಅಗ್ನಿವೀರ್ ಯೋಜನೆಯ ಮೂಲಕ ದೇಶದ ಯೋಧರನ್ನು 'ಮಜ್ದೂರ್'ಗಳನ್ನಾಗಿ (ಕಾರ್ಮಿಕ) ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಾವು ಅಗ್ನಿವೀರ ಯೋಜನೆಯನ್ನು ತೆಗೆದು ಹಾಕಲಿದ್ದೇವೆ. ಅವರನ್ನು ಮತ್ತೆ ಯೋಧರನ್ನಾಗಿ ಮಾಡುತ್ತೇವೆ' ಎಂದು ಹೇಳಿದ್ದಾರೆ.
24 ಮಾನನಷ್ಟ ಮತ್ತು ಕ್ರಿಮಿನಲ್ ಮೊಕದ್ದಮೆ...
'ಬಿಜೆಪಿ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಇದಕ್ಕೆ ಪ್ರತಿಯಾಗಿ ನನ್ನ ವಿರುದ್ಧ 24 ಮಾನನಷ್ಟ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಜಾರಿ ನಿರ್ದೇಶನಾಲಯ (ಇ.ಡಿ) ನನ್ನನ್ನು 50 ಗಂಟೆಗಳ ಕಾಲ ಪ್ರಶ್ನೆ ಮಾಡಿದೆ. ನನ್ನ ಲೋಕಸಭಾ ಸದಸ್ಯತ್ವವನ್ನು ಬಿಜೆಪಿ ಕಸಿದುಕೊಂಡಿತು' ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಜೊತೆ ಬಿಜೆಡಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂದು ಸಹ ರಾಹುಲ್ ಆರೋಪಿಸಿದ್ದಾರೆ. ಒಡಿಶಾದ ಸಂಪತ್ತನ್ನು ಬಿಜೆಡಿ ಹಾಗೂ ಬಿಜೆಡಿ ಸೇರಿ ಲೂಟಿ ಮಾಡಿದೆ ಎಂದು ಟೀಕಿಸಿದ್ದಾರೆ.
'ಜಗನ್ನಾಥ ದೇವರು ಮೋದಿ ಭಕ್ತ' ಎಂದು ಬಿಜೆಪಿ ನಾಯಕರೊಬ್ಬರು ಹೇಳುವ ಮೂಲಕ ಒಡಿಶಾದ ಜನರಿಗೆ ಅವಮಾನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.