ADVERTISEMENT

ಪ್ರತಿ ಮತಗಟ್ಟೆಯ ಮತ ಪ್ರಮಾಣ ಪ್ರಕಟಿಸಲು ಮನವಿ

ಮೊದಲ ಹಂತದ ಮತದಾನದ ಮತ ಪ್ರಮಾಣ ಪರಿಷ್ಕರಿಸಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಮನವಿ

ಪಿಟಿಐ
Published 14 ಮೇ 2024, 15:46 IST
Last Updated 14 ಮೇ 2024, 15:46 IST
   

ನವದೆಹಲಿ: ಪ್ರತಿ ಮತಗಟ್ಟೆಯಲ್ಲಿ ದಾಖಲಾದ ಮತ ಪ್ರಮಾಣವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸಾಮಾಜಿಕ ಕಾರ್ಯಕರ್ತರ ತಂಡವೊಂದು ಚುನಾವಣಾ ಆಯೋಗವನ್ನು ಮಂಗಳವಾರ ಆಗ್ರಹಿಸಿದೆ. ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಚುನಾವಣಾ ಪ್ರಕ್ರಿಯೆ ಮೇಲೆ ಸಾರ್ವಜನಿಕರು ವಿಶ್ವಾಸ ಇರಿಸುವುದು ಬಹಳ ಮುಖ್ಯ ಎಂದು ತಂಡವು ಹೇಳಿದೆ.

ಈ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್‌, ಅಶೋಕ್ ಶರ್ಮ, ಶಬ್ನಮ್‌ ಹಶ್ಮಿ, ನವಶರಣ್‌ ಸಿಂಗ್‌ ಮತ್ತು ಅಮೃತಾ ಜೋಹ್ರಿ ಅವರು ಚುನಾವಣಾ ಆಯುಕ್ತರನ್ನು ಭೇಟಿಯಾಗಿ, 4,000ಕ್ಕೂ ಹೆಚ್ಚು ಜನರ ಸಹಿ ಇರುವ ಮನವಿ ಪತ್ರವನ್ನು ಅವರಿಗೆ ನೀಡಿದ್ದಾರೆ.

ಫಾರ್ಮ್‌– 17ಸಿ ಭಾಗ– 1ರಲ್ಲಿ (ಮತ ದಾಖಲಾತಿ ಪ್ರಕಟಣೆ) ಮತ ಚಲಾವಣೆಯಾದ ನಿಖರ ದಾಖಲೆಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿರುವ ಅವರು, ಮತ ಪ್ರಮಾಣ ಪ್ರಕಟಿಸುವಲ್ಲಿ ಆಯೋಗವು ಭಾರಿ ವಿಳಂಬ ಮಾಡಿದ್ದರ ಕುರಿತು ಮತ್ತು ಪರಿಷ್ಕೃತ ಮತಪ್ರಮಾಣದಲ್ಲಿ ಶೇ 6ರಷ್ಟು ಮತ ಹೆಚ್ಚಳವಾಗಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಜನರಲ್ಲಿ ಆಯೋಗದ ಬಗ್ಗೆ ಅಪನಂಬಿಕೆ ಮೂಡುವಂತಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಏಪ್ರಿಲ್‌ 19ರಂದು ಮೊದಲ ಹಂತದ ಮತದಾನ ನಡೆಯಿತು. ಒಟ್ಟು ಶೇ 60ರಷ್ಟು ಮತದಾನ ನಡೆದಿದೆ ಎಂದು ಅದೇ ದಿನ ಸಂಜೆ ಆಯೋಗವು ಪ್ರಕಟಣೆ ಹೊರಡಿಸಿತ್ತು. ಆದರೆ, 11 ದಿನಗಳ ಬಳಿಕ ಪರಿಷ್ಕೃತ ಮತ ಪ್ರಮಾಣ ಬಿಡುಗಡೆ ಮಾಡಿದ ಆಯೋಗವು, ಶೇ 66.71ರಷ್ಟು ಮತದಾನ ಆಗಿದೆ ಎಂದು ಪ್ರಕಟಣೆ ಹೊರಡಿಸಿತು.

ಈ ಹಿನ್ನೆಲೆಯಲ್ಲಿ ಮೊದಲ ಮೂರು ಹಂತಗಳ ಮತದಾನ ನಡೆದ ಎಲ್ಲಾ ಮತಗಟ್ಟೆಗಳಲ್ಲಿ ದಾಖಲಾದ ಮತ ಪ್ರಮಾಣವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಮುಂದಿನ ಹಂತಗಳ ಮತದಾನದ ಮಾಹಿತಿಯೂ ಮತದಾನ ನಡೆದ 48 ಗಂಟೆಯೊಳಗೆ ಸಾರ್ವಜನಿಕರಿಗೆ ದೊರಕುವಂತೆ ಮಾಡಬೇಕು ಎಂದು ಕಾರ್ಯಕರ್ತರ ತಂಡವು ಮನವಿಪತ್ರದಲ್ಲಿ ಹೇಳಿದೆ.

ಪ್ರತಿ ಮತಗಟ್ಟೆಯಲ್ಲಿ ದಾಖಲಾದ ಮತ ಪ್ರಮಾಣವನ್ನು ಮತದಾನ ನಡೆದ 48 ಗಂಟೆಗಳಲ್ಲಿ ಪ್ರಕಟಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರೆಫಾರ್ಮ್ಸ್‌ (ಎಡಿಆರ್‌) ಎಂಬ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮೇ 17ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.