ADVERTISEMENT

ಎಲ್‌ಡಿಎಫ್‌–ಬಿಜೆಪಿ ನಾಯಕರ ವ್ಯಾಪಾರ ಸಂಬಂಧ: ವ್ಯಾಪಕ ಚರ್ಚೆ

ಲೋಕಸಭಾ ಚುನಾವಣೆ: ಎಲ್‌ಡಿಎಫ್‌ನ ಜಯರಾಜನ್‌ ಮತ್ತು ಕಾಂಗ್ರೆಸ್‌ನ ಸತೀಶನ್‌ ನಡುವೆ ವಾಗ್ವಾದ

ಪಿಟಿಐ
Published 20 ಮಾರ್ಚ್ 2024, 15:27 IST
Last Updated 20 ಮಾರ್ಚ್ 2024, 15:27 IST
ವಿ.ಡಿ. ಸತೀಶನ್‌
ವಿ.ಡಿ. ಸತೀಶನ್‌   

ತಿರುವನಂತಪುರ: ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಸಂಚಾಲಕ ಇ.ಪಿ.ಜಯರಾಜನ್‌ ಅವರ ಕುಟುಂಬ ಮತ್ತು ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ಅವರ ಕಂಪನಿಯ ನಡುವೆ ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದ ಆರೋಪಗಳ ಕುರಿತು ಕೇರಳದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಇವುಗಳ ನಡುವೆಯೇ ಜಯರಾಜನ್‌ ಅವರ ಪತ್ನಿ, ತಮ್ಮ ಚಿತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದರ ಬೆನ್ನಲ್ಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಅವರು ಎಲ್‌ಡಿಎಫ್‌ ಸಂಚಾಲಕರ ವಿರುದ್ಧ ಮಾಡಿರುವ ಆರೋಪಗಳು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ADVERTISEMENT

‘ಸತೀಶನ್‌ ಅವರು ನನ್ನ ಪತ್ನಿಯ ಫೋಟೊಗಳನ್ನು ತಿರುಚಿ ಕೊಳಕು ರಾಜಕೀಯ ಮಾಡುತ್ತಿದ್ದಾರೆ’ ಎಂಬ ಗಂಭೀರ ಆರೋಪವನ್ನು ಜಯರಾಜನ್‌ ಬುಧವಾರ ಮಾಡಿದ್ದಾರೆ. ಆದರೆ, ಸತೀಶನ್‌ ಇದನ್ನು ಅಲ್ಲಗಳೆದಿದ್ದಾರೆ. 

‘ಜಯರಾಜನ್‌ ಕುಟುಂಬವು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರೊಂದಿಗೆ ವ್ಯಾಪಾರ ಸಂಬಂಧ ಹೊಂದಿದೆ ಎಂದು ನಾನು ಹೇಳಿದ್ದೆ. ಅದನ್ನು ಆರಂಭದಲ್ಲಿ ನಿರಾಕರಿಸಿದ್ದ ಅವರು, ಈಗ ತಮ್ಮ ಪತ್ನಿ, ಚಂದ್ರಶೇಖರ್ ಕಂಪನಿಗೆ ಸಂಬಂಧಿಸಿದ ರೆಸಾರ್ಟ್‌ನಲ್ಲಿ ಷೇರುಗಳನ್ನು ಹೊಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಾನು ನನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದ್ದೇನೆ’ ಎಂದು ಸತೀಶನ್‌ ವಾಗ್ದಾಳಿ ನಡೆಸಿದ್ದಾರೆ.

ಸಿಪಿಐ ತನ್ನ ಪಕ್ಷದ ಹಿರಿಯ ಸದಸ್ಯರೊಬ್ಬರು ಬಿಜೆಪಿ ನಾಯಕರ ಜತೆಗೆ ವ್ಯಾಪಾರ ಸಂಬಂಧ ಹೊಂದಿದ್ದರಲ್ಲಿ ಏನಾದರೂ ತಪ್ಪಿದೆಯೇ ಎಂಬುದನ್ನು ಹೇಳಬೇಕು. ಮತ್ತೊಂದೆಡೆ ಸಿಪಿಐ– ಬಿಜೆಪಿ ನಾಯಕರ ನಡುವಿನ ವ್ಯಾಪಾರ ಸಂಬಂಧವನ್ನು ಹೇಗೆ ಅರ್ಥ್ಯಸಬಹುದು ಎಂಬುದನ್ನು ಚಂದ್ರಶೇಖರ್‌ ಅವರೂ ಹೇಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ. 

ಚಂದ್ರಶೇಖರ್‌ ಅವರ ಕಂಪನಿ ಬಿಡುಗಡೆ ಮಾಡಿರುವ ಫೋಟೊಗಳು ತಮ್ಮ ಬಳಿಯಿದ್ದು, ಜಯರಾಜನ್‌ ಅವರ ಕುಟುಂಬದ ಸದಸ್ಯರು ಬಿಜೆಪಿ ನಾಯಕರ ಸಂಸ್ಥೆಯ ಆಡಳಿತದಲ್ಲಿ ಭಾಗಿಯಾಗಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಿರುವನಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ಅವರನ್ನು ಭೇಟಿಯಾದ ತನ್ನ ಪತ್ನಿ ಇಂದಿರಾ ಅವರ ಚಿತ್ರಗಳನ್ನು ತಿರುಚಿರುವುದರ ಹಿಂದೆ ಸತೀಶನ್‌ ಅವರ ಕೈವಾಡವಿದೆ ಎಂದು ಜಯರಾಜನ್‌ ಆರೋಪಿಸಿದ್ದಾರೆ. ಆದರೆ ಇದನ್ನು ಸತೀಶನ್‌ ನಿರಾಕರಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ಈ ಹಿಂದೆಯೂ ಜಯರಾಜನ್‌ ಮತ್ತು ಚಂದ್ರಶೇಖರ್‌ ಅವರ ನಡುವೆ ವ್ಯಾಪಾರ ಸಂಬಂಧ ಇರುವುದಾಗಿ ಆರೋಪಿಸಿದ್ದರು. ಆಗ ಅವರಿಬ್ಬರೂ ಈ ಆರೋಪವನ್ನು ಅಲ್ಲಗಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.