ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೋದಿ ಅವರ ಧ್ಯಾನವನ್ನು ಪ್ರಸಾರ ಮಾಡಿದರೆ ಚುನಾವಣಾ ಆಯೋಗಕ್ಕೆ (ಇಸಿ) ದೂರು ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರಧಾನಿ ಮೋದಿ ಧ್ಯಾನ ನಡೆಸಲಿ. ಒಂದು ವೇಳೆ ಮೋದಿ ಧ್ಯಾನವನ್ನು ಪ್ರಸಾರ ಮಾಡಿದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು (ಎಂಸಿಸಿ), ಈ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತದ ಬಹಿರಂಗ ಪ್ರಚಾರ ಮೇ 30ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಸ್ವಾಮಿ ವಿವೇಕಾನಂದ ಧ್ಯಾನ ಕೈಗೊಂಡಿದ್ದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನ ಕೈಗೊಳ್ಳಲಿದ್ದಾರೆ.
'ಯಾರೇ ಆದರೂ ಧ್ಯಾನ ಮಾಡಲು ಕ್ಯಾಮೆರಾಗಳ ಅಗತ್ಯವಿದೆಯೇ? ಇದು ಕೂಡ ಪ್ರಚಾರ ಮಾಡುವ ವಿಧಾನವಾಗಿದೆ' ಎಂದು ಮಮತಾ ಆರೋಪಿಸಿದ್ದಾರೆ.
'ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ರಾಜಕೀಯ ಪಕ್ಷ, ಚುನಾವಣೆ, ಸ್ವಾತಂತ್ರ್ಯ, ಧರ್ಮ, ಮಾನವೀಯತೆ ಮತ್ತು ಸಂಸ್ಕೃತಿ ಅಸ್ತಿತ್ವದಲ್ಲಿ ಇರುವುದಿಲ್ಲ' ಎಂದು ಮಮತಾ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.