ADVERTISEMENT

ಬಿಜೆಪಿ ಸಂಸದ ತಿವಾರಿಯಿಂದ ಹಲ್ಲೆಗೆ ಪ್ರಚೋದನೆ: ಕನ್ಹಯ್ಯ ಕುಮಾರ್ ಆರೋಪ

ಪಿಟಿಐ
Published 18 ಮೇ 2024, 15:32 IST
Last Updated 18 ಮೇ 2024, 15:32 IST
ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್   

ನವದೆಹಲಿ: ‘ಮತದಾರರು ತಿರಸ್ಕರಿಸುತ್ತಿದ್ದಾರೆ ಎಂಬುದು ಮನದಟ್ಟಾದ್ದರಿಂದ ಹಾಲಿ ಸಂಸದ, ಬಿಜೆಪಿಯ ಮನೋಜ್‌ ತಿವಾರಿ ನನ್ನ ಮೇಲೆ ಹಲ್ಲೆಗೆ ಉತ್ತೇಜನ ನೀಡುತ್ತಿದ್ದಾರೆ’ ಎಂದು ದೆಹಲಿ ಈಶಾನ್ಯ ಕ್ಷೇತ್ರದ ‘ಇಂಡಿಯಾ’ ಮೈತ್ರಿ ಅಭ್ಯರ್ಥಿ ಕನ್ಹಯ್ಯ ಕುಮಾರ್ ಟೀಕಿಸಿದ್ದಾರೆ.

ಕನ್ಹಯ್ಯ ಕುಮಾರ್ ಅವರ ಮೇಲೆ ಶುಕ್ರವಾರ ಕೆಲವರು ಶಾಯಿ ಎರಚಿದ್ದು, ಹಲ್ಲೆಗೆ ಯತ್ನಿಸಿದ್ದರು. ದೆಹಲಿಯ ನ್ಯೂ ಉಸ್ಮಾನ್‌ಪುರದಲ್ಲಿ ಸ್ಥಳೀಯ ಕಾರ್ಪೊರೇಟರ್ ಛಾಯಾ ಶರ್ಮಾ ಅವರ ಭೇಟಿ ಬಳಿಕ ಎಎಪಿ ಕಚೇರಿಯಿಂದ ನಿರ್ಗಮಿಸುವಾಗ ಈ ಕೃತ್ಯ ನಡೆದಿತ್ತು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಘಟನೆಗೆ ಪ್ರತಿಕ್ರಿಯಿಸಿದ ಕನ್ಹಯ್ಯ ಕುಮಾರ್, ‘ಮನೋಜ್‌ ತಿವಾರಿ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ತಿರುಚಲಾದ ವಿಡಿಯೊಗಳನ್ನು ಬಳಸುವ ಮೂಲಕ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.   

ADVERTISEMENT

‘ಮನೋಜ್‌ ತಿವಾರಿ ಅವರು ತಮ್ಮ ಸಾಧನೆಗಳನ್ನು ಹೇಳದೆ, ನಾನು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಆದಾಗಿನಿಂದಲೂ ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ. ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅವರಿಗೆ ಕಳೆದ 10 ವರ್ಷಗಳ ಸಾಧನೆ ಎಂದು ಹೇಳಿಕೊಳ್ಳಲು ಕನಿಷ್ಠ 10 ಯೋಜನೆಗಳು ಇಲ್ಲವಾಗಿವೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ, ಬಿಜೆಪಿಯ ದೆಹಲಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, ಕನ್ಹಯ್ಯ ಕುಮಾರ್ ಅವರು ತುಕ್ಡೆ–ತುಕ್ಡೆ ಸಿದ್ಧಾಂತದ ಪ್ರಚಾರ ಮಾಡುತ್ತಿದ್ದಾರೆ. ಅವರು ಅಭ್ಯರ್ಥಿಯಾದ ದಿನವೇ ಸಾರ್ವಜನಿಕರ ವಿರೋಧ ಎದುರಿಸುತ್ತಾರೆ ಎಂಬುದು ಸ್ಪಷ್ಟವಾಗಿತ್ತು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.