ADVERTISEMENT

ಬಿಜೆಪಿಯಿಂದ ಧ್ರುವೀಕರಣ: ಪ್ರಧಾನಿ ಮೋದಿ, ನಡ್ಡಾ ವಿರುದ್ಧ ಕಾಂಗ್ರೆಸ್ ಆರೋಪ

ಪಿಟಿಐ
Published 26 ಏಪ್ರಿಲ್ 2024, 16:24 IST
Last Updated 26 ಏಪ್ರಿಲ್ 2024, 16:24 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಎದುರಾಗುವ ಭೀತಿಯಿಂದ ಕೋಮು ಆಧಾರದ ಧ್ರುವೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ಕಾಂಗ್ರೆಸ್‌ ಪಕ್ಷವು ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ನಡ್ಡಾ ಅವರು ನೀಡಿರುವ ಹೇಳಿಕೆಯ ಬೆನ್ನಲ್ಲೇ ಪಕ್ಷವು ಪ್ರತಿಕ್ರಿಯಿಸಿದೆ.

‘ನಿಜ ಸಂಗತಿಯೆಂದರೆ ಬಿಜೆಪಿಯು ಆತಂಕದಲ್ಲಿದೆ. ಪಕ್ಷವು ದಕ್ಷಿಣ ಭಾರತದಲ್ಲಿ ನಿರ್ನಾಮವಾಗಿದ್ದು, ಉತ್ತರ ಭಾರತದಲ್ಲೂ ಹಿನ್ನಡೆ ಅನುಭವಿಸುತ್ತಿರುವುದು ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರಿಗೆ ಅರಿವಾಗಿದೆ. ಈ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿದೆ. ಆದ್ದರಿಂದ ಧ್ರುವೀಕರಣವೇ ಅವರ ಮುಂದಿರುವ ಏಕೈಕ ಕಾರ್ಯತಂತ್ರ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. 

ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಪ್ರಧಾನಿ ಅವರು ಈಚೆಗೆ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ‘ಪ್ರಧಾನಿ ಅವರು ಕಪೋಲಕಲ್ಪಿತ ಕಥೆಗಳು ಮತ್ತು ಸುಳ್ಳನ್ನು ಹೇಳುತ್ತಿದ್ದಾರೆ. ಅವರು ನಮ್ಮ ಪ್ರಣಾಳಿಕೆಯನ್ನು ಓದಬೇಕಿತ್ತು’ ಎಂದರು.

‘ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಚಾರ ಮಾಡಿದ್ದಕ್ಕೆ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರಣಾಳಿಕೆಯ ಪ್ರಚಾರಕ್ಕೆ ಬೇಕಾದಷ್ಟು ಹಣ ನಮ್ಮ ಬಳಿ ಇರಲಿಲ್ಲ. ಮೋದಿ ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್‌ನ ಸ್ಥಾನಗಳನ್ನು ಹೆಚ್ಚಿಸುತ್ತಿದ್ದಾರೆ. ಮುಂದಿನ ಐದು ಹಂತಗಳಲ್ಲಿಯೂ ನೀವು ಅದನ್ನೇ ಮಾಡುವಿರಿ ಎಂದು ಭಾವಿಸುತ್ತೇವೆ’ ಎಂದು ತಿಳಿಸಿದರು.

ಜೆ.ಪಿ.ನಡ್ಡಾ ಅವರ ಆರೋಪಗಳು ಸುಳ್ಳನ್ನು ಆಧರಿಸಿವೆ. ಸುಳ್ಳಿನ ವಿಚಾರದಲ್ಲಿ ನಡ್ಡಾ ಪ್ರಧಾನಿ ಮೋದಿ ಅವರನ್ನು ಹಿಂಬಾಲಿಸುತ್ತಿರುವಂತೆ ತೋರುತ್ತದೆ
ಜೈರಾಮ್‌ ರಮೇಶ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.