ADVERTISEMENT

ಮೋದಿ ಲೆಕ್ಕವಿಲ್ಲದೇ ಏನನ್ನೂ ಹೇಳುವುದಿಲ್ಲ; NDAಗೆ 400 ಸೀಟು ಬರುತ್ತೆ: ಸಂಬಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2024, 3:09 IST
Last Updated 25 ಮೇ 2024, 3:09 IST
<div class="paragraphs"><p>ಸಂಬಿತ್ ಪಾತ್ರಾ </p></div>

ಸಂಬಿತ್ ಪಾತ್ರಾ

   

-ಪಿಟಿಐ ಚಿತ್ರ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಲೆಕ್ಕವಿಲ್ಲದೇ ಏನನ್ನೂ ಹೇಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರೂ ಮನೆಯಿಂದ ಹೊರಗೆ ಬಂದು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಎನ್‌ಡಿಎಗೆ 400 ಸ್ಥಾನಗಳು ಬರುತ್ತವೆ ಎಂದು ಮೋದಿ ಅವರು ಹೇಳಿದ್ದಾರೆ. ಅದು ಸಂಭವಿಸುತ್ತದೆ’ ಎಂದು ಪಾತ್ರಾ ತಿಳಿಸಿದ್ದಾರೆ.

ಈಚೆಗೆ ಸಂಬಿತ್ ಪಾತ್ರಾ ಅವರು ಸ್ಥಳೀಯ ಮಾಧ್ಯಮಕ್ಕೆ ನೀಡಿದ್ದ ಜಾಹೀರಾತಿನಲ್ಲಿ ಜಗನ್ನಾಥ ದೇವಾಲಯದ ಫೋಟೊ ಬಳಕೆ ಮಾಡಿರುವುದರ ಸಂಬಂಧ ಆಡಳಿತಾರೂಢ ಬಿಜು ಜನತಾ ದಳವು (ಬಿಜೆಡಿ) ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಪೂರ್ಣ ಪುಟದ ಜಾಹೀರಾತಿನಲ್ಲಿ ಜಗನ್ನಾಥ ದೇವಾಲಯದ ಜೊತೆ ಸಂಬಿತ್‌ ಅವರ ಫೋಟೊ ಹಾಗೂ ಬಿಜೆಪಿಯ ಚಿಹ್ನೆಯನ್ನು ಪ್ರಕಟಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರಿಗೆ ನೀಡಿರುವ ದೂರಿನಲ್ಲಿ ಬಿಜೆಡಿ ಆರೋಪಿಸಿತ್ತು.

‘ಜಗನ್ನಾಥ ದೇವರು ಮೋದಿ ಅವರ ಭಕ್ತ’ ಎನ್ನುವ ಹೇಳಿಕೆ ನೀಡುವ ಮೂಲಕವೂ ಸಂಬಿತ್‌ ಅವರು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹೇಳಿಕೆ ನೀಡಿದ್ದಕ್ಕೆ ಸಂಬಿತ್‌ ಅವರು ಬಳಿಕ ಕ್ಷಮೆ ಯಾಚಿಸಿದ್ದರು.

ಇಂದು ಒಟ್ಟು 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟು 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೆಹಬೂಬಾ ಮುಫ್ತಿ, ಮನೋಹರ್‌ ಲಾಲ್‌ ಖಟ್ಟರ್‌, ಧರ್ಮೇಂದ್ರ ಪ್ರಧಾನ್‌, ದೀಪೇಂದರ್‌ ಹೂಡಾ, ಕನ್ಹಯ್ಯ ಕುಮಾರ್‌ ಸೇರಿದಂತೆ ಹಲವು ಘಟಾನುಘಟಿ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಇದೇ ಹಂತದಲ್ಲಿ ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ತಾಪಮಾನವು ಅಧಿಕವಾಗಿದೆ. ಜೊತೆಗೆ, ಕೆಲವೆಡೆ ಮಳೆಯ ಮುನ್ಸೂಚನೆಯೂ ಇದೆ. ಹೀಗಾಗಿ, ಮತದಾರರ ಆರೋಗ್ಯವನ್ನು ಹಾಗೂ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.