ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ರನೌತ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಅವರ ಮಾಡಿರುವ ಪೋಸ್ಟ್ ಕುರಿತು ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಸುಪ್ರಿಯಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರನೌತ್ ಫೋಟೊ ಸಮೇತ ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್ ಅನ್ನು ಅಳಿಸಿಹಾಕಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಪ್ರಕರಣ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
‘ಪ್ರಿಯ ಸುಪ್ರಿಯಾ ಜೀ, ನನ್ನ ವೃತ್ತಿಜೀವನದ ಕಳೆದ 20 ವರ್ಷಗಳಲ್ಲಿ ಕಲಾವಿದೆಯಾಗಿ ನಾನು ಎಲ್ಲಾ ರೀತಿಯ ಮಹಿಳೆಯರ ಪಾತ್ರವನ್ನು ನಿರ್ವಹಿಸಿದ್ದೇನೆ. ರಾಣಿಯ ನಿಷ್ಕಪಟ ಹುಡುಗಿಯಿಂದ ಢಾಕಡ್‌ನ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದ ದೇವತೆಯಿಂದ ಚಂದ್ರಮುಖಿಯಲ್ಲಿ ರಾಕ್ಷಸನವರೆಗೆ, ತಲೈವಿಯ ಕ್ರಾಂತಿಕಾರಿ ನಾಯಕನಿಗೆ ರಜ್ಜೋದಲ್ಲಿ ವೇಶ್ಯೆಯಾಗಿಯು ಕಾಣಿಸಿಕೊಂಡಿದ್ದೇನೆ’ ಎಂದು ರನೌತ್ ಪೋಸ್ಟ್ ಮಾಡಿದ್ದಾರೆ.
ಈ ವಿಚಾರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸುಪ್ರಿಯಾ, ‘ಈ ಫೋಸ್ಟ್ ಅವಹೇಳಕಾರಿಯಾಗಿದೆ ಎಂದು ತಿಳಿದ ತಕ್ಷಣ ನಾನು ಆ ಪೋಸ್ಟ್ ಅನ್ನು ಅಳಿಸಿದ್ದೇನೆ. ನಾನು ಯಾವುದೇ ಮಹಿಳೆಯ ಬಗ್ಗೆ ವೈಯಕ್ತಿಕ ಮತ್ತು ಅಸಭ್ಯವಾದ ಕಾಮೆಂಟ್‌ಗಳನ್ನು ಎಂದಿಗೂ ಮಾಡಲಾರೆ. ಇದು ನನ್ನ ಬಗ್ಗೆ ತಿಳಿದಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ’ ಎಂದು ಹೇಳಿದ್ದಾರೆ.
‘ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಕಂಗನಾ ಅವರ ಬಗ್ಗೆ ‘ಆಕ್ಷೇಪಾರ್ಹ ಪೋಸ್ಟ್’ ಅನ್ನು ಹಂಚಿಕೊಂಡಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ತಿಳಿಯಲು ಮುಂದಾಗಿದ್ದೇನೆ. ಜತೆಗೆ, ನಕಲಿ ಖಾತೆ ಕುರಿತು ವರದಿ ಮಾಡಿದ್ದೇನೆ’ ಎಂದು ಸುಪ್ರಿಯಾ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.