ADVERTISEMENT

ಅಮೇಠಿಯ ಗೆಲುವು ಸೇಡಲ್ಲ; ರಾಹುಲ್ ರಾಯ್‌ಬರೇಲಿ ಉಳಿಸಿಕೊಳ್ಳಲಿ– ಕಿಶೋರಿಲಾಲ್

ಪಿಟಿಐ
Published 5 ಜೂನ್ 2024, 14:39 IST
Last Updated 5 ಜೂನ್ 2024, 14:39 IST
<div class="paragraphs"><p>ರಾಹುಲ್ ಗಾಂಧಿ ಮತ್ತು ಕಿಶೋರಿಲಾಲ್‌ ಶರ್ಮಾ</p></div>

ರಾಹುಲ್ ಗಾಂಧಿ ಮತ್ತು ಕಿಶೋರಿಲಾಲ್‌ ಶರ್ಮಾ

   

ಪಿಟಿಐ ಚಿತ್ರ

ನವದೆಹಲಿ: ‘ಉತ್ತರ ಪ್ರದೇಶದ ಅಮೇಠಿಯು ಗಾಂಧಿ ಕುಟುಂಬದ ಆಸ್ತಿಯಾಗಿದ್ದು, ಆ ನಂಬಿಕೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಅಮೇಠಿ ಸಂಸದ ಕಿಶೋರಿಲಾಲ್ ಶರ್ಮಾ ಹೇಳಿದ್ದಾರೆ.

ADVERTISEMENT

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 1.67 ಲಕ್ಷ ಮತಗಳ ಅಂತರದಲ್ಲಿ ಪರಾಭವಗೊಳಿಸಿದ ಶರ್ಮಾ ಅವರು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

‘ರಾಜಕೀಯದಲ್ಲಿ ಸೇಡು ಎಂಬುದು ಇರುವುದಿಲ್ಲ. ಅಮೇಠಿಯಲ್ಲಿ 2019ರಲ್ಲಿ ಸ್ಮೃತಿ ಅವರು ರಾಹುಲ್ ಅವರನ್ನು ಪರಾಭವಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳುವ ಅರ್ಥವನ್ನು ಕಲ್ಪಿಸುವುದೂ ತಪ್ಪು. ರಾಜಕೀಯದಲ್ಲಿ ಸೇಡು ಇರದು. ಏನಿದ್ದರೂ ಸೋಲ ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾಮನೋಭಾವ ಇರಬೇಕಷ್ಟೇ. ಈ ಫಲಿತಾಂಶವನ್ನು ನಾವು ಸೇಡು ಎಂದು ಪರಿಗಣಿಸುವುದಿಲ್ಲ. ಅಮೇಠಿಯಲ್ಲಿನ ಕಾಂಗ್ರೆಸ್ ಜಯ, ಜನರ ಗೆಲುವಾಗಿದೆ’ ಎಂದಿದ್ದಾರೆ.

‘ಸಂಸತ್ತಿನಲ್ಲಿ ಉತ್ತಮ ಸಂಸದೀಯ ಪಟುವಾಗುವಂತೆ ರಾಹುಲ್ ಮಾರ್ಗದರ್ಶನ ಮಾಡಿದ್ದಾರೆ. ನಾನು ಮೊದಲ ಬಾರಿ ಸಂಸದ. ಅವರು ಈಗಾಗಲೇ ಸಂಸದರಾಗಿದ್ದಾರೆ. ಅವರಿಂದಲೇ ನಾನು ಕಲಿಯುವುದು ಸಾಕಷ್ಟಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರು ರಾಯ್‌ಬರೇಲಿಯನ್ನು ಉಳಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಅಪೇಕ್ಷೆ’ ಎಂದು ಶರ್ಮಾ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಈ ಬಾರಿ ವಯನಾಡ್‌ ಹಾಗೂ ರಾಯಬರೇಲಿಯಿಂದ ಸ್ಪರ್ಧಿಸಿದ್ದರು. ವಯನಾಡ್‌ನಲ್ಲಿ 3.6 ಲಕ್ಷ ಹಾಗೂ ರಾಯಬರೇಲಿಯಲ್ಲಿ 3.9ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಶರ್ಮಾ ವಿರುದ್ದ ಬಿಜೆಪಿ ನಾಯಕರು ಮಾಡಿದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘ಬಿಜೆಪಿ ನಾಯಕರಿಗೆ ಗೌರವಯುತವಾಗಿ ಮಾತನಾಡಲೇ ಬರುವುದಿಲ್ಲ. ಕಿಶೋರಿಲಾಲ್‌ ಶರ್ಮಾ ಅವರು ಕಳೆದ 40 ವರ್ಷಗಳಿಂದ ಅಮೇಠಿಯಲ್ಲಿ ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರೊಂದಿಗೆ ಅವರು ಆಳವಾದ ಸಂಬಂಧ ಹೊಂದಿದ ಕಾರಣದಿಂದ ಅವರು ಅಲ್ಲಿ ಗೆಲುವು ದಾಖಲಿಸಿದ್ದಾರೆ. ಇದು ಬಿಜೆಪಿಗರಿಗೆ ತಿಳಿಯದು’ ಎಂದಿದ್ದಾರೆ.

‘ಪಕ್ಷದಲ್ಲಿ ಮುಂದೆ ಅವರು ಯಾವ ಹುದ್ದೆಯನ್ನು ಹೊಂದಲಿದ್ದಾರೆ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ’ ಎಂದು ರಾಹುಲ್ ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು 55 ಸಾವಿರ ಮತಗಳ ಅಂತರದ ಗೆಲುವು ದಾಖಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.