ADVERTISEMENT

'ಇಂಡಿಯಾ' ರ್‍ಯಾಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅಲ್ಲ, ಕುಟುಂಬಕ್ಕಾಗಿ: ಬಿಜೆಪಿ

ಪಿಟಿಐ
Published 31 ಮಾರ್ಚ್ 2024, 10:54 IST
Last Updated 31 ಮಾರ್ಚ್ 2024, 10:54 IST
<div class="paragraphs"><p>ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಆಯೋಜಿಸಿರುವ ರ್‍ಯಾಲಿಯಲ್ಲಿ ಪಾಲ್ಗೊಂಡಿರುವ ಎಎಪಿ ಬೆಂಬಲಿಗರು</p></div>

ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಆಯೋಜಿಸಿರುವ ರ್‍ಯಾಲಿಯಲ್ಲಿ ಪಾಲ್ಗೊಂಡಿರುವ ಎಎಪಿ ಬೆಂಬಲಿಗರು

   

ಪಿಟಿಐ ಚಿತ್ರ

ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ನಡೆಸುತ್ತಿರುವ ರ್‍ಯಾಲಿಯ ಉದ್ದೇಶ, 'ಪ್ರಜಾಪ್ರಭುತ್ವದ ರಕ್ಷಣೆ' ಅಲ್ಲ. ಬದಲಾಗಿ 'ಕುಟುಂಬದ ರಕ್ಷಣೆ' ಮತ್ತು 'ಭ್ರಷ್ಟಾಚಾರ ಬಯಲಾಗದಂತೆ ಬಚ್ಚಿಡುವುದು' ಎಂದು ಬಿಜೆಪಿ ಟೀಕಿಸಿದೆ.

ADVERTISEMENT

ದೆಹಲಿಯ ಎಎಪಿ ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ, ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನು ಖಂಡಿಸಿ ವಿರೋಧ ಪಕ್ಷಗಳು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಇಂದು (ಭಾನುವಾರ) 'ಪ್ರಜಾಪ್ರಭುತ್ವ ಉಳಿಸಿ' ರ್‍ಯಾಲಿ ನಡೆಸುತ್ತಿವೆ.

ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ಇಂಡಿಯಾ ಮೈತ್ರಿಕೂಟದ ವಿರುದ್ಧ ಕಿಡಿಕಾರಿದ್ದಾರೆ.‌ ರ್‍ಯಾಲಿ ಆಯೋಜಿಸಿರುವ ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳ ಕೆಲವು ನಾಯಕರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು 2014ಕ್ಕಿಂತ ಹಿಂದಿನವು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಅವುಗಳನ್ನು ಹೊರಗೆಳೆಯುತ್ತಿದೆ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದಿದ್ದಾರೆ.

ಹಿಂದೊಮ್ಮೆ, ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ದೊಡ್ಡ ಚಳವಳಿ ನಡೆದಿತ್ತು ಎಂದಿರುವ ಬಿಜೆಪಿ ನಾಯಕ, ಆಗ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಇಂದು ರ್‍ಯಾಲಿ ಆಯೋಜಿಸಿದ್ದಾರೆ ಎಂದು ಕುಟುಕಿದ್ದಾರೆ.

ಆಮ್‌ ಆದ್ಮಿ ಪಕ್ಷ (ಎಎಪಿ), ಇತರ ವಿರೋಧ ಪಕ್ಷಗಳೊಂದಿಗೆ ಮುನ್ನಡೆಯುತ್ತಿರುವುದನ್ನು ಉಲ್ಲೇಖಿಸಿರುವ ತ್ರಿವೇದಿ, ಹಲವು ನಾಯಕರನ್ನು ಕಳ್ಳರು, ವಂಚಕರು ಎಂದು ತಿರಸ್ಕರಿಸಿದ್ದವರು ಇಂದು ಅದೇ ನಾಯಕರೊಂದಿಗೆ ಕೈಜೋಡಿಸಿರುವುದು ವಿಚಿತ್ರವೆನಿಸುತ್ತಿದೆ ಎಂದು ತಿವಿದಿದ್ದಾರೆ.

ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್‌, ಈಗ ಅವರ ನಾಯಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಹಳೆಯ ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ವಿರೋಧ ಪಕ್ಷಗಳ ನಾಯಕರಲ್ಲ ಒಂದಾಗಿದ್ದಾರೆ. ಅವರೆಲ್ಲ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು ಹಾಗೂ ಅದರಲ್ಲಿ ಕೆಲವರು ಹಿಂದೂ ಧರ್ಮವನ್ನೇ ನಿರ್ಮೂಲನೆ ಮಾಡುವ ಮಾತುಗಳನ್ನಾಡಿದ್ದರು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಉಳಿವಿಗಾಗಿ ತಾವೆಲ್ಲ ಒಂದಾಗಿರುವುದಾಗಿ ಈ ಪಕ್ಷಗಳು ಹೇಳಿಕೊಳ್ಳುತ್ತಿವೆ. ಆದರೆ, ಅವರೆಲ್ಲ ಒಂದಾಗಿರುವುದು, ಮತ್ತೊಬ್ಬರನ್ನು ಬೆಳೆಯಲು ಬಿಡದ ತಮ್ಮ ಕೌಟುಂಬಿಕ ಸಂಘಟನೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ. ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.